ಅರವಿಂದ್​ ಕೇಜ್ರಿವಾಲ್​​ ಮನೆ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಎಫ್​ಐಆರ್ ದಾಖಲು​; ಕಾರಣ ಹೀಗಿದೆ..

Untitled-design-2024-09-14T172026.127-1
Published on

ನವದೆಹಲಿ: ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಪಟಾಕಿ ಸಿಡಿಸಿದ ಕಾರಣ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತಿಹಾರ್ ಜೈಲಿನಿಂದ ಶುಕ್ರವಾರ ಕೇಜ್ರಿವಾಲ್ ಬಿಡುಗಡೆಯಾದ ನಂತರ ಈ ಘಟನೆ ನಡೆದಿದೆ. ಮುಂಬರುವ ಚಳಿಗಾಲದಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ದೆಹಲಿ ಸರ್ಕಾರ ಸೋಮವಾರ ನಿಷೇಧಿಸಿದೆ.

ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 223 (ಸಾರ್ವಜನಿಕ ಸೇವಕ ನೀಡಿದ ಆದೇಶಗಳಿಗೆ ಅವಿಧೇಯತೆ) ಅಡಿಯಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸಿಎಂ ನಿವಾಸದ ಹೊರಗೆ ಪಟಾಕಿ ಸಿಡಿಸಲಾಗಿದೆ.

ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವ ಮೊದಲು ಸುಪ್ರೀಂಕೋರ್ಟ್​​ ಕೆಲವು ಷರತ್ತುಗಳನ್ನು ಹಾಕಿದೆ. 10 ಲಕ್ಷ ರೂಪಾಯಿಗಳ ಜಾಮೀನು ಬಾಂಡ್​​​ಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ಅರವಿಂದ್ ಕೇಜ್ರಿವಾಲ್ ಅವರನ್ನು ನಿರ್ದೇಶಿಸುತ್ತೇವೆ ಎಂದು ತೀರ್ಪನ್ನು ಓದುವಾಗ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

ಪ್ರಕರಣದ ಬಗ್ಗೆ ಯಾವುದೇ ಸಾರ್ವಜನಿಕ ಕಾಮೆಂಟ್‌ಗಳನ್ನು ಮಾಡದಂತೆ ಹಾಗೂ ವಿನಾಯಿತಿ ನೀಡದ ಹೊರತು ವಿಚಾರಣಾ ನ್ಯಾಯಾಲಯದ ಮುಂದೆ ಎಲ್ಲಾ ವಿಚಾರಣೆಗಳಿಗೆ ಹಾಜರಾಗುವಂತೆ ನ್ಯಾಯಾಲಯ ಕೇಜ್ರಿವಾಲ್‌ಗೆ ಸೂಚಿಸಿದೆ. ಇಡಿ ಪ್ರಕರಣದಲ್ಲಿ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳು ಇಲ್ಲಿಯೂ ಅನ್ವಯಿಸುತ್ತವೆ ಎಂದು ಹೇಳಿದೆ. ಅವರು ಮುಖ್ಯಮಂತ್ರಿ ಕಚೇರಿಗೆ ಪ್ರವೇಶಿಸುವುದನ್ನು ನ್ಯಾಯಾಲಯವು ನಿರ್ಬಂಧಿಸಿದೆ.

ದೆಹಲಿ ಅಬಕಾರಿ ನೀತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ 2024 ಮಾರ್ಚ್​​​ 21ರಂದು ಜಾರಿ ನಿರ್ದೇಶನಾಲಯ(ಇಡಿ) ಕೇಜ್ರಿವಾಲ್​ ಅವರನ್ನು ಬಂಧಿಸಿತು. ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾಗಲೆ 2024 ಜೂನ್​​ 26ರಂದು ಸಿಬಿಐನಿಂದ ಬಂಧಿಸಲ್ಪಟ್ಟರು. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net