

ಬೆಂಗಳೂರು: ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿರುವ ಫ್ಯಾಂಟಮ್ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗುತ್ತಿದೆ. ಬಹುತೇಕ ಸೆಟ್ನಲ್ಲಿಯೇ ಈ ಸಿನಿಮಾ ನಿರ್ಮಾಣವಾಗುತ್ತಿರುವುದರಿಂದ ಮಿನಿ ಅರಣ್ಯವನ್ನೇ ಹೈದರಾಬಾದ್ನ ಅನ್ನಪೂರ್ಣ ಮತ್ತು ರಾಮೋಜಿ ರಾವ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಸಣ್ಣ ಪುಟ್ಟ ಸ್ನೀಕ್ ಪಿಕ್ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ನಾಯಕ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು, ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಫ್ಯಾಂಟಮ್ ಚಿತ್ರದ ಶೂಟಿಂಗ್ಗೆ ಚಾಲನೆ ನೀಡಲಾಗಿತ್ತು. ಇದೀಗ ಬಹುತೇಕ ಚಿತ್ರೀಕರಣ ಮುಗಿಸಿಕೊಂಡು, ಕೊನೇ ಹಂತದ ಶೂಟಿಂಗ್ಗೆ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರದ ಕೊನೇ ಭಾಗದ ದೃಶ್ಯವನ್ನು ಸೆರೆಹಿಡಿಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ಕುಂಬಳಕಾಯಿ ಒಡೆದು ಮುಂದಿನ ಕೆಲಸಗಳತ್ತ ದೃಷ್ಟಿ ಹಾಯಿಸುವ ಲೆಕ್ಕಾಚಾರದಲ್ಲಿದೆ ತಂಡ. ಅಂದಹಾಗೆ, ಇಲ್ಲಿಗೆ ಶೂಟಿಂಗ್ ಮುಗಿಯಿತು ಎಂದಲ್ಲ. ಹೈದರಾಬಾದ್ ಶೂಟಿಂಗ್ ಮುಗಿಸಿ, ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ಒಂದಷ್ಟು ಶೂಟಿಂಗ್ ನಡೆಯಲಿದೆ. ಬಳಿಕ ಹಾಡುಗಳ ಚಿತ್ರೀಕರಣವೂ ನಡೆಯಬೇಕಿದೆ.
ಈ ವಿಚಾರವನ್ನು ಸ್ವತಃ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ‘ಕೊನೇ ಭಾಗದ ಫ್ಯಾಂಟಮ್ ಶುರುವಾಗಿದೆ. ತುಂಬ ಸವಾಲಿನ ಚಿತ್ರೀಕರಣಕ್ಕೆ ಸಜ್ಜಾಗಿದ್ದೇವೆ. ಅದನ್ನು ದೃಶ್ಯ ರೂಪಕ್ಕೆ ತರುವುದೇ ದೊಡ್ಡ ಟಾಸ್ಕ್ ಆಗಿದೆ. ಹೈದರಾಬಾದ್ನಲ್ಲಿ ಕೊನೇ ಹಂತದ ಶೂಟಿಂಗ್’ ಎಂದು ಸುದೀಪ್ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಕನ್ನಡಿಗ’ ತಂಡ ಸೇರಿಕೊಂಡ ವಿದೇಶಿ ಕನ್ನಡಿಗ
ಇನ್ನು ಜಾಕ್ ಮಂಜು ಜತೆಗೆ ಅಲಂಕಾರ್ ಪಾಂಡಿಯನ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಇತ್ತೀಚೆಗಷ್ಟೇ ಅವರನ್ನು ತಂಡ ಬರಮಾಡಿಕೊಂಡಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.