ಪ್ರಿಯಾಂಕಾ ಮೆಗಾ ಸೂಪರ್​ಸ್ಟಾರ್; ಹುಟ್ಟುಹಬ್ಬಕ್ಕೆ ಸಿಕ್ಕಿತು ಹೊಸ ಬಿರುದು

Priyanka
Published on

ಬೆಂಗಳೂರು: ‘ಅವರು ನಿರ್ದೇಶನ ಮಾಡಿದರೆ ಅದೇ ದೊಡ್ಡ ಗಿಫ್ಟು ...’ ಹಾಗಂತ ಖುಷಿಯಿಂದ ಹೇಳಿಕೊಳ್ಳು ತ್ತಾರೆ ಪ್ರಿಯಾಂಕಾ ಉಪೇಂದ್ರ. ಇಂದು ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಉಪೇಂದ್ರ ಏನು ಗಿಫ್ಟ್ ಕೊಡುತ್ತಿದ್ದಾರೆ ಎಂದು ಕೇಳಿದರೆ, ‘ನಾವೆಲ್ಲ ಅವರ ಅಭಿಮಾನಿಗಳು. ಅಭಿಮಾನಿಗಳು ಕೇಳುತ್ತಿರುವಾಗ ಚಿತ್ರ ಮಾಡಬೇಕಲ್ವಾ? ಅವರು ನಿರ್ದೇಶನ ಮಾಡುವುದೇ ನಮಗೆ ದೊಡ್ಡ ಗಿಫ್ಟು’ ಎನ್ನುತ್ತಾರೆ ಪ್ರಿಯಾಂಕಾ.

ಉಪೇಂದ್ರ ಯಾವಾಗ ಗಿಫ್ಟು ಕೊಡುತ್ತಾರೋ ಗೊತ್ತಿಲ್ಲ. ‘ಖೈಮರಾ’ ಚಿತ್ರದ ತಂಡದವರು, ಪ್ರಿಯಾಂಕಾಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗಿಫ್ಟು ಕೊಟ್ಟಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸೈಕಲಾಜಿಕಲ್ ಹಾರರ್ ಚಿತ್ರವಾಗಿದ್ದು, ಇದರಲ್ಲಿ ಪ್ರಿಯಾಂಕಾ ಉಪೇಂದ್ರ ಜತೆಗೆ ಪ್ರಿಯಾಮಣಿ ಮತ್ತು ಛಾಯಾ ಸಿಂಗ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಿಯಾಂಕಾಗೆ ‘ಖೈಮರಾ’ ಚಿತ್ರತಂಡದವರು ಹೊಸದೊಂದು ಬಿರುದನ್ನೂ ನೀಡಿದ್ದಾರೆ. ಅದೇ ‘ಲೇಡಿ ಮೆಗಾ ಸೂಪರ್​ಸ್ಟಾರ್’.

ಕನ್ನಡದ ನಟಿಯರಿಗೆ ಇಂಥದ್ದೊಂದು ಬಿರುದನ್ನು ಇದುವರೆಗೂ ಯಾರೂ ನೀಡಿರಲಿಲ್ಲ. ಈಗ ಅಂಥದ್ದೊಂದು ಬಿರುದು ಪ್ರಿಯಾಂಕಾ ಅವರಿಗೆ ಸಿಕ್ಕಿದೆ. ಅದಕ್ಕೆ ಕಾರಣ, ಅವರು ಸೆಟ್​ನಲ್ಲಿ ಬಹಳ ಸರಳವಾಗಿ ಇರುತ್ತಾರಂತೆ. ಕ್ಯಾಮರಾ ಆನ್ ಆಗುತ್ತಿದ್ದಂತೆಯೇ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಾರಂತೆ. ಹಾಗಾಗಿಯೇ ಅವರಿಗೆ ಇಂಥದ್ದೊಂದು ವಿಶೇಷ ಬಿರುದು ನೀಡಲಾಗಿದೆ. ‘ಖೈಮರಾ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾದರೂ, ಚಿತ್ರ ಪ್ರಾರಂಭವಾಗುವುದಕ್ಕೆ ಇನ್ನೊಂದು ತಿಂಗಳಿದೆ. ಅಷ್ಟರಲ್ಲಿ ಅವರು ‘1980’ ಮತ್ತು ‘ಲೈಫ್ ಈಸ್ ಬ್ಯೂಟಿಫುಲ್’ ಎಂಬ ಚಿತ್ರಗಳನ್ನು ಮುಗಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net