ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಧ್ವನಿ ಎನ್ನಲಾದ ಇನ್‌ಸ್ಪೆಕ್ಟರ್ ವರ್ಗಾವಣೆ ಕುರಿತ ಆಡಿಯೋ ವೈರಲ್

umapathi
ನಿರ್ಮಾಪಕ ಉಮಾಪತಿ
Published on

ಬೆಂಗಳೂರು : ಇನ್‌ಸ್ಪೆಕ್ಟರ್ ವರ್ಗಾವಣೆ ಸಂಬಂಧ ಚಿತ್ರ ನಿರ್ಮಾಪಕ, ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ಸಾಮಾಜಿಕ ಕಾರ್ಯಕರ್ತನ ನಡುವಿನ ಸಂಭಾಷಣೆ ವೈರಲ್ ಆಗಿದೆ.

ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಸಂಭಾಷಣೆ ಎನ್ನಲಾಗಿದೆ. ತೇಜೋವಧೆ ಮಾಡುವ ಉದ್ದೇಶದಿಂದ ಆಡಿಯೊ ಮಾರ್ಫಿಂಗ್ ಮಾಡಲಾಗಿದೆ ಎಂದು ಆರೋಪಿಸಿ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ಉಮಾಪತಿ ಶ್ರೀನಿವಾಸ್ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪೊಲೀಸರು ವಿಜಯ್ ಡೆನ್ನಿಸ್ ವಿರುದ್ಧ ಸುಲಿಗೆ ಮತ್ತು ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಜಯ್ ಡೆನ್ನಿಸ್‌ಗೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಉಮಾಪತಿ, ಸಾಮಾಜಿಕ ಕಾರ್ಯಕರ್ತ ಎನ್ನಲಾದ ವಿಜಯ್ ಡೆನ್ನಿಸ್ ಹಲವರಿಗೆ ಬೆದರಿಸಿ ಸುಲಿಗೆ ಮಾಡಿರುವುದು ಗಮನಕ್ಕೆ ಬಂದಿದೆ. ಕೆಲ ದಿನಗಳ ಹಿಂದೆ ನನಗೂ ಕರೆ ಮಾಡಿ 10 ಲಕ್ಷ ರು. ಕೇಳಿದ್ದರು. ಅಷ್ಟೊಂದು ಹಣವಿಲ್ಲ. 50 ಸಾವಿರ ಅಥವಾ 1 ಲಕ್ಷ ರೂ. ಬೇಕಾದರೆ ಕೊಡುವೆ ಎಂದಿದ್ದೆ. ಆಗ ಬೇಡ ಎಂದು ಆತ ಹೇಳಿದ್ದ. ಮತ್ತೆ ಕೆಲ ದಿನಗಳ ಬಳಿಕ ಕರೆ ಮಾಡಿದ್ದ ವಿಜಯ್, ನನ್ನ ಬಳಿ ನಿಮಗೆ ಸಂಬಂಧಿಸಿದ ದಾಖಲೆ ಇದೆ. ಅದನ್ನು ಬಿಡುಗಡೆ ಮಾಡುತ್ತೇನೆ. 5 ಲಕ್ಷ ರೂ. ಕೊಟ್ಟರೆ ಸುಮ್ಮನೆ ಇರುವುದಾಗಿ ಹೇಳಿದ್ದ. ನಾನು ಏನಾದರೂ ಮಾಡಿಕೋ ಎಂದು ಕರೆ ಸ್ಥಗಿತಗೊಳಿಸಿದ್ದೆ.

ಆಡಿಯೋದಲ್ಲಿ ಇರುವ ಇನ್‌ಸ್ಪೆಕ್ಟರ್ ಯಾರು ಎಂಬುದು ಆತನೇ ತಿಳಿಸಬೇಕು. ನಾನು ತಪ್ಪು ಮಾಡಿದ್ದರೆ ವಿಜಯ್ ಮತ್ತು ಮಾಧ್ಯಮಗಳ ಮೇಲೆ ತಡೆಯಾಜ್ಞೆ ತರುತ್ತಿದ್ದೆ. ನಾನು ತಪ್ಪು ಮಾಡಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.

ಆಡಿಯೋದಲ್ಲಿ ಏನಿದೆ ?:

ನಾಲ್ಕು ನಿಮಿಷ ಅವಧಿಯ ಆಡಿಯೋ ಸಂಭಾಷಣೆಯಲ್ಲಿ ವಿಜಯ್ ಡೆನ್ನಿಸ್ ಎನ್ನಲಾದ ವ್ಯಕ್ತಿ ತಮ್ಮ ಸಂಬಂಧಿ ಇನ್‌ಸ್ಪೆಕ್ಟರ್ ವರ್ಗಾವಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉಮಾಪತಿ ಗೌಡ ಎನ್ನಲಾದ ವ್ಯಕ್ತಿ ‘ಕಮಿಟ್ ಆಗಿತ್ತಲ್ಲ. ನಾನು ಆಲ್‌ರೆಡಿ ಏನು ತಲುಪಿಸಬೇಕೋ ತಲುಪಿಸಿದ್ದೇನೆ. ಹೋಂ ಮಿನಿಸ್ಟರ್ ಜತೆಗೂ ಮಾತನಾಡಿದ್ದೇನೆ. 2 ತಿಂಗಳ ಹಿಂದೆಯೇ ಮಾತನಾಡಿದ್ದೇನೆ. ಈ ಕೆಲಸಕ್ಕಾಗಿಯೇ ಮೂರು ಜನರನ್ನು ಬಿಟ್ಟಿದ್ದಾರೆ. ಅವರು ಏನು ಮಾತನಾಡಬೇಕೋ ಮಾತನಾಡಿದ್ದಾರೆ. ಕಮಿಟ್ ಆದ ಮೇಲೆ ಮತ್ತೆ ಹೀಗೆ ಮಾಡೋದು ಚೆನ್ನಾಗಿ ಕಾಣಿಸಲ್ಲ. ನಾನು ಎಷ್ಟೋ ಕೋಟಿ ಕಳೆದುಕೊಂಡಿದ್ದೇನೆ.

ಇದೆಲ್ಲ ನನಗೆ ದೊಡ್ಡದಲ್ಲ. ಇದರ ಬಗ್ಗೆ ಚರ್ಚೆ ಬೇಡ. ನನ್ನವರೆಗೆ ಇದು ಬರುವುದ ಬೇಡ. ಬೇರೆಯವರಿಗೆ ಕೊಟ್ಟಿದ್ದನ್ನು ಕಿತ್ತು ಇವರಿಗೆ ಮಾಡಿಸಿದ್ದೇವೆ, ಎಲ್ಲ ಆದ ಮೇಲೆ ಹೀಗೆ ಮಾಡಿದರೆ ಹೇಗೆ? ಬೇಡ ಬಿಡಿ. ಏನು ಬೇಡ. ಫಸ್ಟ್ ನಾವು ಏನೇ ಕೊಟ್ಟರೂ ಹಾನರ್ ಮಾಡಬೇಕು. ನಾನು ಕ್ಯಾಂಡಿಡೇಟ್. ಇರುವುದು ಮೈ ಗೌವರ್ನಮೆಂಟ್. ಡಿಸಿಪಿ, ಎಸಿಪಿಯೂ ಹೇಳಿದ ಕೆಲಸ ಮಾಡಬೇಕು. ನಾನು ಅವರ ಜತೆಗೆ ಮಾತನಾಡುತ್ತೇನೆ. ಇದನ್ನು ಇಲ್ಲಿಗೆ ಬಿಡಿ’ ಎನ್ನುವಲ್ಲಿಗೆ ಸಂಭಾಷಣೆ ಅಂತ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net