

ಬೈಂದೂರು: ಇಲ್ಲಿನ ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಹಾಗೂ ಬೈಂದೂರು ಹೋಬಳಿಯ ಎಲ್ಲ ಗ್ರಾಮಾಡಳಿತ ಅಧಿಕಾರಿಗಳೊಂದಿಗೆ ಶಾಸಕ ಗುರುರಾಜ್ ಗಂಟಿಹೊಳೆ ಸಭೆ ನಡೆಸಿದರು.
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಪ್ರಸ್ತುತ ಸಾಗುವಳಿ ಸಕ್ರಮೀಕರಣಕ್ಕೆ ಅರ್ಜಿ ಹಾಕಿದ ರೈತರು ಹಾಗೂ ಸರ್ಕಾರಿ ಜಾಗದಲ್ಲಿ ವಾಸ್ತವ್ಯದ ಉದ್ದೇಶಕ್ಕಾಗಿ ಮನೆ ಕಟ್ಟಿಕೊಂಡ ಬಡವರು ಹಲವಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಈವರೆಗೂ ಹಕ್ಕುಪತ್ರ ದೊರಕದೇ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಜನವರಿ ಎರಡನೇ ವಾರದಲ್ಲಿ ಕಡತ ವಿಲೇವಾರಿ ಸಪ್ತಾಹ ಆಯೋಜಿಸಲು ಸೂಚನೆ ನೀಡಿದರು.
ಬಾಕಿ ಇರುವ ಶೂನ್ಯ ಸಮಸ್ಯಾತ್ಮಕ ಎಲ್ಲ ಅರ್ಹ ಕಡತ ವಿಲೇವಾರಿ ಮಾಡಿ ಹಕ್ಕುಪತ್ರ ಒದಗಿಸಲು ಕ್ರಮವಹಿಸಲು ಹಾಗೂ ಜನವರಿ ತಿಂಗಳ ಅಂತ್ಯದೊಳಗೆ ಎಲ್ಲ ಸಮಸ್ಯೇತರ ಕಡತ ವಿಲೇವಾರಿ ಮಾಡಿ ರೈತರಿಗೆ ಹಕ್ಕುಪತ್ರ ಒದಗಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಜನವರಿ ಅಂತ್ಯಕ್ಕೆ ಸಮಸ್ಯಾತ್ಮಕವಲ್ಲದ ಯಾವುದೇ ಕಡತ ಬಾಕಿ ಉಳಿಯದಂತೆ ಕಂದಾಯ ಇಲಾಖೆ ಎಲ್ಲ ಸ್ತರದ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಮೌಖಿಕ ಆದೇಶ ನೀಡಿದರು.
ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ವಿಷಯ ನಿರ್ವಾಹಕರು ಹಾಗೂ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.