ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಮರವಂತೆಯ ಹೊರಬಂದರಿನ ಎರಡನೇ ಹಂತದ ಕಾಮಗಾರಿಯು ಸಿಆರ್‌ಜಡ್ ಕಾರಣದಿಂದ 3 ವರ್ಷಗಳಿಂದ ನನೆಗುದಿಗೆ ಬಿದ್ದಂತಾಗಿದ್ದು, ಕೊನೆಗೂ ಕಾಮಗಾರಿಗೆ ಸಿಆರ್‌ಜಡ್ ಅನುಮತಿ ಸಿಕ್ಕಿದೆ.
ಕೇರಳ ಮಾದರಿಯ ಮರವಂತೆ ಹೊರಬಂದರಿನ (ಔಟ್ ಡೋರ್) ಎರಡನೇ ಹಂತದ ಕಾಮಗಾರಿಗೆ 3 ವರ್ಷ ಹಿಂದೆಯೇ ಸರ್ಕಾರದಿಂದ 85 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಆದರೆ ಸಿಆರ್‌ಜಡ್ ಅನುಮತಿ ಸಿಗದಿರುವ ಕಾರಣ ಕಾಮಗಾರಿ ಆರಂಭಿಸಲು ಸಮಸ್ಯೆಯಾಗಿತ್ತು. ಕಳೆದೊಂದು ವರ್ಷದಿಂದ ಬಂದರು ಮತ್ತು ಮೀನುಗಾರಿಕಾ ಇಲಾಖೆಯು ಸಿಆರ್‌ಜಡ್ ಅನುಮತಿ ಸಿಗಲು ಕರಾವಳಿ ನಿರ್ವಹಣಾ ಯೋಜನೆ ನಕ್ಷೆ ಸಹಿತ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು, ಈಗ ಸಿಆರ್‌ಝಡ್‌ನಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸುಮಾರು 5 ಸಾವಿರದಷ್ಟು ಮಂದಿಗೆ ಈ ಮರವಂತೆ ಬಂದರು ಜೀವನಾಧಾರವಾಗಿದ್ದು, ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡರೆ ಹಲವು ಸಮಸ್ಯೆಗಳು ಕೊನೆಗೊಳ್ಳಲಿವೆ. ಕಾಮಗಾರಿ ಪೂರ್ಣಗೊಳ್ಳಲಿದ್ದರೆ ಸೈಕ್ಲೋನ್, ವಿಪರೀತ ಗಾಳಿ, ಅಲೆಗಳ ಅಬ್ಬರದಿಂದ ದೋಣಿಗಳು ಬಂದರಿಗೆ ಆಗಮಿಸಲು ಹಾಗೂ ತೆರಳಲು ತೊಂದರೆಯಾಗುತ್ತವೆ. ಪ್ರಸ್ತುತ ಬಂದರಿನ ಕಾಮಗಾರಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.
ಅಂತೂ ಇಂತು ಕೊನೆಗೂ ಎರಡನೇ ಹಂತದ ಕಾಮಗಾರಿಗೆ ಸಿಆರ್‌ಝಡ್ ಅನುಮತಿ ಸಿಕ್ಕಿರುವುದು ಮೀನುಗಾರರೆಲ್ಲರಿಗೂ ಸಂತಸವಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು. ಮೀನುಗಾರರ ಬೇಡಿಕೆಯಂತೆ ಉತ್ತರ ಭಾಗದ ಬದಲು ಮಧ್ಯದಿಂದ ದೋಣಿಗಳು ಒಳ ಬರಲು ಅವಕಾಶ ನೀಡುವಂತೆ ಯೋಜನೆ ಸಿದ್ಧಪಡಿಸಿದ್ದು, ಅದರಂತೆ ಕಾಮಗಾರಿ ಆಗಲಿ.
-ಮೋಹನ್ ಖಾರ್ವಿ ಮರವಂತೆ, ಮೀನುಗಾರ ಮುಖಂಡ