ಕಬಡ್ಡಿ ಆಟಗಾತಿಯ ತಲೆಗೂದಲನ್ನೇ ಕತ್ತರಿಸಿದ್ರು, ಅವಳ ತಾಯಿ ಮೇಲೂ ಹಲ್ಲೆ ನಡೆಸಿದ್ರು; ಇದು 'ಗಂಡ-ಹೆಂಡತಿ ಮತ್ತು ಅವನು' ಕಥೆ...

Crime
Published on

ನವದೆಹಲಿ: ಆಕೆ ಕಬಡ್ಡಿ ಆಟಗಾತಿ, 20 ವರ್ಷದ ಆ ಯುವತಿ ಕ್ರೀಡಾ ತರಬೇತಿ ಸಂಸ್ಥೆಗೆ ತೆರಳಲು ಸಜ್ಜಾಗುತ್ತಿದ್ದಳು. ಅಷ್ಟರಲ್ಲಿ ಇನ್ನೊಂದು ಕೋಣೆಯಿಂದ ತಾಯಿ ಚೀರಾಡಿದ ಸದ್ದು ಕೇಳಿ ಬಂದವಳಿಗೆ ಕಾಣಿಸಿದ್ದು, ಮಹಿಳೆಯರ ಒಂದು ಗುಂಪು. ತಾಯಿ ಮೇಲೆ ಹಲ್ಲೆ ನಡೆಯುತ್ತಿದ್ದುದನ್ನು ನೋಡಿ ತಪ್ಪಿಸಲು ಹೋದ ಕಬಡ್ಡಿ ಆಟಗಾತಿ ಮೇಲೂ ಗುಂಪು ಹಲ್ಲೆ ನಡೆಸಿದ್ದು, ಆಕೆಯ ತಲೆಗೂದಲನ್ನು ಕೂಡ ಕತ್ತರಿಸಿ ಹಾಕಿದೆ.

ಈ ಗುಂಪು ಘರ್ಷಣೆಯ ವಿಡಿಯೋ ವೈರಲ್​ ಆಗಿದ್ದು, ಕಬಡ್ಡಿ ಆಟಗಾತಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಯೋಧರೊಬ್ಬರ ಪತ್ನಿಯನ್ನು ಬಂಧಿಸಿದ್ದಾರೆ. ಸೇನೆಯಲ್ಲಿರುವ ವ್ಯಕ್ತಿಯೊಬ್ಬರ ಪತ್ನಿಯಾಗಿರುವ ಶ್ರಬಂತಿ ಮಲಿಕ್​ ಈ ಪ್ರಕರಣದಲ್ಲಿ ಆರೋಪಿ. ಶ್ರಬಂತಿ ತನ್ನ ಪತಿಯೊಂದಿಗೆ ಆ ಕಬಡ್ಡಿ ಆಟಗಾತಿಯ ತಾಯಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಿಸಿ ಈ ಹಲ್ಲೆ ನಡೆಸಿದ್ದಾರೆ.

ಪಶ್ಚಿಮಬಂಗಾಳದ ಪರ್ಗಾನಾಸ್ ಜಿಲ್ಲೆಯ ಬೊನ್​ಗೋನ್​ನಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಈ ಕುರಿತ ವಿಡಿಯೋ ವೈರಲ್ ಆಗಿತ್ತು. ನಾನು ತರಬೇತಿ ಕೇಂದ್ರಕ್ಕೆ ತೆರಳಲು ಸಜ್ಜಾಗುತ್ತಿದ್ದಾಗ ಮಹಿಳೆಯರ ಗುಂಪೊಂದು ಬಂದು ತಾಯಿಯ ಮೇಲೆ ದಾಳಿ ನಡೆಸಿತ್ತು. ತಾಯಿಯನ್ನು ರಕ್ಷಿಸಲು ಹೋದ ನನ್ನ ಮೇಲೂ ದಾಳಿ ಮಾಡಿ, ಕೂದಲು ಕತ್ತರಿಸಿ, ಮನೆಯಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಯಾರೂ ನಮ್ಮ ರಕ್ಷಣೆಗೆ ಬರಲಿಲ್ಲ ಎಂದು ಜಿಲ್ಲಾಮಟ್ಟದ ಆ ಕಬಡ್ಡಿ ಆಟಗಾತಿ ಹೇಳಿಕೊಂಡಿದ್ದಾರೆ. ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net