

ಭೋಪಾಲ್: ಗಂಡ-ಹೆಂಡತಿ (Husband Wife) ಜಗಳ ಉಂಡು ಮಲಗುವ ತನಕ ಎಂದು ನಮ್ಮ ಹಿರಿಯರು ಬಹಳ ಹಿಂದೆಯೇ ಹೇಳಿದ್ದಾರೆ. ಸಂಸಾರದಲ್ಲಿ ಕೆಲವೊಮ್ಮ ಕಲಹ ಉಂಟಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಏನೇನೋ ಆಗಿದೆ. ಇದೀಗ ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದ್ದು, ಗಂಡನ ಜೊತೆ ಜಗಳವಾಡಿದ ಹೆಂಡತಿ ಚಲಿಸುವ ರೈಲಿನಿಂದ ಜಿಗಿದಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ.
ಈ ಘಟನೆಯು ಮಧ್ಯಪ್ರದೇಶದ ಬರೌನಿ ಹಾಗೂ ಗುಜರಾತ್ನ ಅಹಮದಾಬಾದ್ ನಡುವೆ ಸಂಚರಿಸುವ ಬರೌನಿ ಎಕ್ಸ್ಪ್ರೆಸ್ನಲ್ಲಿ ನಡೆದಿದ್ದು, ಮಹಿಳೆ ಬದುಕಿದ್ದಾಳ ಇಲ್ಲವಾ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಒರೈ ಮತ್ತು ಅಟ್ಟಾ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಪಾನಮತ್ತರಾದಂತೆ ಕಾಣುವ ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡುತ್ತಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಪತಿಯ ಜೊತೆ ಜಗಳವಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಬಾಗಿಲ ಬಳಿ ಹೋಗಿ ಅಲ್ಲಿಂದ ಮಹಿಳೆ ಚಲಿಸುವ ರೈಲಿನಿಂದ ಜಿಗಿದಿದ್ದಾಳೆ. ಇದನ್ನು ನೋಡಿದ ಸಹ ಪ್ರಯಾಣಿಕರು ಆಕೆಯನ್ನು ರಕ್ಷಿಸಲು ಯತ್ನಿಸುತರಾದರೂ ಕೊನೆಯಲ್ಲಿ ವಿಫಲರಾಗುತ್ತಾರೆ. ಇದಾದ ನಂತರ ರೈಲನ್ನು ನಿಲ್ಲಿಸಲಾಗಿದ್ದು, ಆದರೆ ಮಹಿಳೆಯ ಜೀವ ಉಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಲಭ್ಯವಾಗಿಲ್ಲ.
ಅವಿನಾಶ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕರು ಪತಿಯ ನಡೆಯನ್ನು ಖಂಡಿಸಿದ್ದು, ವಿಡಿಯೋ ಕಂಡು ಶಾಕ್ ಆಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.