

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕರ್ನಾಟಕ ಸರಕಾರದಿಂದ ಕೃಷಿ ಇಲಾಖೆ ಮೂಲಕ 35 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯವನ್ನು ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಕಾಪಿಕಾಡ್ ಎಂಬಲ್ಲಿಗೆ ಎತ್ತಂಗಡಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಬೆಳ್ತಂಗಡಿ ಕೃಷಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಬೆಳ್ತಂಗಡಿಯ ಬೀಜೋತ್ಪಾದನಾ ಕೇಂದ್ರದ ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿದೆ.
ಪ್ರಯೋಗಾಲಯದ ಉದ್ದೇಶ
ರಸಗೊಬ್ಬರಗಳ ಗುಣಮಟ್ಟ, ಲಭ್ಯತೆ ಮತ್ತು ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಾರಿಗೆ ತಂದಿರುವ ನಿರ್ಣಾಯಕ ನಿಯಂತ್ರಕ ಚೌಕಟ್ಟು ಇದಾಗಿದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮತ್ತು ರೈತರು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಂತಿಮ ಗುರಿಯೊಂದಿಗೆ, ರಸಗೊಬ್ಬರಗಳ ಗುಣಮಟ್ಟ ಮತ್ತು ಮಾರಾಟವನ್ನು ನಿಯಂತ್ರಿಸಲು ಇದು ಒಂದು ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ರೈತರು ಸಾಮಾನ್ಯವಾಗಿ ತಮ್ಮ ಬೆಳೆಗಳಿಗೆ ರಸಗೊಬ್ಬರವನ್ನು ಬಳಸುತ್ತಾರೆ. ಈ ರಸಗೊಬ್ಬರಗಳನ್ನು ಮಾರಾಟ ಮಾಡುವ ಅನೇಕ ಮಾರಾಟದ ಅಂಗಡಿಗಳಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಸಗೊಬ್ಬರಗಳ ಗುಣಮಟ್ಟ ಖಚಿತಪಡಿಸುವುದು ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
4 ಜಿಲ್ಲಾ ವ್ಯಾಪ್ತಿಗೆ 1 ಪ್ರಯೋಗಾಲಯ
ಬೆಳ್ತಂಗಡಿಯಲ್ಲಿರುವ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ನಾಲ್ಕು ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ. ಈ ಜಿಲ್ಲೆಗಳಲ್ಲಿರುವ ಸಹಾಯಕ ಕೃಷಿ ನಿರ್ದೇಶಕರು ನಿಯಂತ್ರಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಇಂದು ಮಾರುಕಟ್ಟೆಗಳಲ್ಲಿ ಅನೇಕ ವಿಧದ ರಸಗೊಬ್ಬರಗಳು ಬರುತ್ತಿದ್ದು, ಇವುಗಳು ಉತ್ತಮ ಗೊಬ್ಬರಗಳೇ ಅಥವಾ ಕಳಪೆ ಗೊಬ್ಬರವೇ ಇದರ ಗುಣಮಟ್ಟ ಸರಿಯಾಗಿದೆಯೇ ಎಂಬ ಬಗ್ಗೆ ಕೃಷಿಕರಿಗೆ ಮಾಹಿತಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಿಯಂತ್ರಕ ಅಧಿಕಾರಿಗಳು ಆ ರಸಗೊಬ್ಬರದ ಮಾದರಿ ಸಂಗ್ರಹಿಸಿ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಗೊಬ್ಬರದ ಗುಣಮಟ್ಟ ಪತ್ತೆ ಮಾಡಲಾಗುತ್ತದೆ. ಕಳಪೆ ಗುಣಮಟ್ಟದ ಗೊಬ್ಬರವಾದರೆ ಇದರ ಬಗ್ಗೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ರಸಗೊಬ್ಬರದ ಬಗ್ಗೆ ಕೃಷಿಕರಿಂದ ಯಾವುದಾದರೂ ದೂರು ಬಂದಲ್ಲಿ ಕೂಡಾ ಅದರ ಮಾದರಿ ಪಡೆದು ಪರೀಕ್ಷೆ ನಡೆಸಿ ಇಲ್ಲಿ ವರದಿ ನೀಡಲಾಗುತ್ತಿದೆ.
ಸಿಬ್ಬಂದಿ ಕೊರತೆ, ಅಸಮರ್ಪಕ ಕಟ್ಟಡ ನೆಪ
ನಾಲ್ಕು ಜಿಲ್ಲೆಗಳಿಗೆ ಒಂದು ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಇದ್ದು, ಇದನ್ನು ಕೇಂದ್ರ ಸ್ಥಾನಕ್ಕೆ ಸ್ಥಳಾಂತರಿಸುವ ಯೋಜನೆಯಿದೆ. ಬೆಳ್ತಂಗಡಿಯಲ್ಲಿರುವ ಪ್ರಯೋಗಾಲಯಗಳಲ್ಲಿ ಸಿಬ್ಬಂದಿ ಕೊರತೆ ಜತೆಗೆ ಕಟ್ಟಡ ಸಮರ್ಪಕವಾಗಿಲ್ಲ ಎಂಬ ನೆಪ ಇಟ್ಟುಕೊಂಡು ಬೆಳ್ತಂಗಡಿಯ ಪ್ರಯೋಗಾಲಯವನ್ನು ಮಂಗಳೂರಿಗೆ ಸ್ಥಳಾಂತರಿಸುವ ಯೋಚನೆಯಿತ್ತು. ಆದರೆ ಮಂಗಳೂರಿನಲ್ಲಿ ಸಮರ್ಪಕ ಜಾಗ ದೊರೆಯದ ಹಿನ್ನೆಲೆಯಲ್ಲಿ ಈಗ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಕಾಪಿಕಾಡ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈಗಾಗಲೇ ಕಾಪಿಕಾಡ್‌ನಲ್ಲಿ ಶಿಲಾನ್ಯಾಸ
ಈಗಾಗಲೇ ತೊಕ್ಕೊಟ್ಟು ಕಾಪಿಕಾಡ್‌ನಲ್ಲಿ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಕಟ್ಟಡ ನಿರ್ಮಾಣಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಇತ್ತಿಚೆಗೆ ಶಿಲಾನ್ಯಾಸ ನೆರವೇರಿಸಿದ್ದು, ಕಟ್ಟಡದ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿ ಕಟ್ಟಡ ಪೂರ್ಣಗೊಂಡ ಬಳಿಕ ಬೆಳ್ತಂಗಡಿಯ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ. ಈ ಹಿಂದಿನ ಶಾಸಕರ ಪ್ರಯತ್ನದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಗೊಂಡು ಇದುವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಉತ್ತಮ ಕಟ್ಟಡದ ವ್ಯವಸ್ಥೆಯಿದೆ. ಕೃಷಿಕರಿಗೂ ಅನುಕೂಲವಾಗಿತ್ತು. ಆದರೆ ಈ ಸಂಸ್ಥೆಯನ್ನು ತಾಲೂಕಿನಿಂದ ಸ್ಥಳಾಂತರಿಸುವುದು ಕೃಷಿಕರಿಗೆ ಅಸಮಾಧಾನ ತಂದಿದೆ. ಜತೆಗೆ ಇಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಜೀವನ ನಿರ್ವಹಣೆಗೂ ಸಮಸ್ಯೆ ತಂದೊಡ್ಡಲಿದೆ.
ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುವಂತೆ ತೊಕೊಟ್ಟಿಗೆ ಈ ಕೇಂದ್ರವನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದರಿಂದ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದು. ಬೆಳ್ತಂಗಡಿಯ ಕೇಂದ್ರದಲ್ಲಿ ಪ್ರಯೋಗಾಲಯಕ್ಕೆ ಬರುವವರ ಸಂಖ್ಯೆ ಕಡಿಮೆ ಇದೆ. ಕುಮುದಾ ಮಂಗಳೂರು ಕೃಷಿ ಇಲಾಖೆ ಡಿ.ಡಿ