ತಂಬಾಕು ಗಿಡಗಳಿಗೆ ಎರಡು ಬಾರಿ ಗೊಬ್ಬರ ಹಾಕಿ

HUN-MAY-23-4(CTRI PROGRAMME)
Published on

ಹುಣಸೂರು: ತಂಬಾಕು ಗಿಡಗಳ ನಿರ್ವಹಣೆ ವೇಳೆ ವಿವಿಧ ರಾಸಾಯನಿಕ ಗೊಬ್ಬರಗಳನ್ನು ಮಿಶ್ರಣ ಮಾಡಿ ಒಂದೇ ಬಾರಿಗೆ ಹಾಕುವ ಪದ್ಧತಿಯನ್ನು ರೈತರು ಕೈಬಿಡಬೇಕು ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಸಲಹೆ ನೀಡಿದರು.

ನಗರದ ಸಿಟಿಆರ್‌ಐ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಸರ್ಕಾರ ಪ್ರಾಯೋಜಿತ ಗಿರಿಜನ ಉಪಯೋಜನೆಯಡಿ(ಎಸ್‌ಸಿಪಿ) ಆಯ್ದ 100ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ತಂಬಾಕು ಬೆಳೆಯುವ ರೈತರಿಗೆ ಹಸಿರುಮನೆ ಶೀಟ್‌ಗನ್ನು ವಿತರಿಸಿ ಮಾತನಾಡಿದರು.

ಕೃಷಿ ಕಾರ್ಮಿಕರ ಕೊರತೆ ಸಾಕಷ್ಟು ಕಾಡುತ್ತಿರುವುದು ನಿಜ. ರೈತರು ತಂಬಾಕು ಕೃಷಿಯಲ್ಲಿನ ನೂತನ ಪದ್ಧತಿಗಳನ್ನು ಅನುಸರಿಸುವುದನ್ನು ಬಿಟ್ಟರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲ. ರಾಸಾಯನಿಕ ಗೊಬ್ಬರಗಳನ್ನು ಒಂದೇ ಬಾರಿಗೆ ಗಿಡಗಳಿಗೆ ನೀಡದೆ, ನಿಗದಿತ ಅವಧಿಯ ಅಂತರದಲ್ಲಿ ಎರಡು ಬಾರಿ ನೀಡಿದಲ್ಲಿ ಗಿಡಗಳು ಉತ್ತಮವಾಗಿ ಗೊಬ್ಬರಗಳ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ. ಅಲ್ಲದೇ ಮೂರು ರೀತಿಯ ಗೊಬ್ಬರಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ನೀಡುವುದರಿಂದ ಗೊಬ್ಬರಗಳ ಪರಿಣಾಮಕಾರಿ ಫಲಿತಾಂಶ ಸಿಗಲು ಸಾಧ್ಯವಿಲ್ಲ. ಇದೀಗ ನಾಟಿ ಮಾಡಿದ ತಂಬಾಕು ಸಸಿಗಳಿಗೆ ಚೊಟರು ರೋಗ ಕಾಣಿಸಿಕೊಂಡಿದ್ದು, 5 ಗ್ರಾಂ ಉಲ್ಲಾಳ ಔಷಧ ಅಥವಾ 5 ಗ್ರಾಂ. ಪನಾಮ ಔಷಧವನ್ನು 10 ಲೀ.ನೀರಿಗೆ ಬೆರಸಿ ಸಿಂಪಡಿಸಿದಲ್ಲಿ ರೋಗ ನಿವಾರಣೆಯಾಗುತ್ತದೆ ಎಂದರು.

ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್ ಮಾತನಾಡಿ, ಸಕಾಲದಲ್ಲಿ ತಂಬಾಕು ನಾಟಿ ಮಾಡುವ ಮೂಲಕ ನಿಗದಿತ ಅವಧಿಯಲ್ಲಿ ಮಾರುಕಟ್ಟೆಗೆ ಹದಗೊಳಿಸಿದ ತಂಬಾಕು ತರಲು ಸಾಧ್ಯ. ನೂತನ ಪದ್ಧತಿಗಳ ಅನುಸರಣೆ ಇಂದಿನ ಅಗತ್ಯವಾಗಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು. ಐಟಿಸಿ ಕಂಪನಿಯ ಲೀಫ್ ಮ್ಯಾನೇಜರ್ ಚನ್ನವೀರೇಶ್, ತಂಬಾಕು ಹರಾಜು ಮಾರುಕಟ್ಟೆಯ ಹರಾಜು ಅಧೀಕ್ಷಕ ಮೀನಾ, ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ, ಸುರೇಶ್‌ಕುಮಾರ್, ಶರೀಫ್, ಶರವಣ ಕುಮಾರ್ ಸೇರಿದಂತೆ ತಂಬಾಕು ಕೃಷಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net