ಕಾಕಿನಾಡ: ತಮ್ಮ ನಟನೆ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ಆಂಧ್ರ ಹಾಗೂ ತೆಲಂಗಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂಚಿರುವ ಜೂ. ಎನ್ಟಿಆರ್ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಇಷ್ಟಪಡುತ್ತಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಜೂ. ಎನ್ಟಿಆರ್ಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋವಿಂಗ್ ಇದ್ದು, ಅನೇಕರು ಅವರ ತಾತ ಹಾಗೂ ತಾರಕರಾಮ್ ಅವರ ಫೋಟೋವನ್ನು ಮನೆಯಲ್ಲಿಟ್ಟುಕೊಂಡಿದ್ದಾರೆ. ಕೆಲವರು ತಮ್ಮ ದೇಹದ ಮೇಲೆ ಟ್ಯಾಟೂವನ್ನು ಹಾಕಿಸಿಕೊಂಡು ಅಭಿಮಾನ ತೋರಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ತಮ್ಮ ಅಭಿಮಾನವನ್ನು ವಿಭಿನ್ನವಾಗಿ ತೋರ್ಪಡಿಸಿದ್ದು, ವ್ಯಾಪಕವಾಗಿ ಸುದ್ದಿಯಾಗುತ್ತಿದೆ.
ಕೆಲ ದಿನಗಳ ಕ್ಯಾನ್ಸರ್ ಪೀಡಿತ ಅಭಿಮಾನಿಯೊಬ್ಬರ ಜೊತೆ ಜೂ. ಎನ್ಟಿಆರ್ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದರು. ಆತ ತಾನು ಸಾಯುವ ಮುನ್ನ ದೇವರ ಚಿತ್ರವನ್ನು ನೋಡಲು ಅಸೆಯಾಗಿದೆ ಎಂದು ತನ್ನ ಕೊನೆ ಆಸೆಯನ್ನು ವ್ಯಕ್ತಪಡಿಸಿದ್ದ. ಆದರೆ, ಇದೀಗ ಮಹಿಳಾ ಅಭಿಮಾನಿಯೊಬ್ಬರು ಮೆದುಳು ಶಸ್ತ್ರಚಿಕಿತ್ಸೆ ನಡೆಯುವಾಗ ತಾವು ಎಚ್ಚರವಾಗಿರಲೆಂದು ಜೂ. ಎನ್ಟಿಆರ್ ಸಿನಿಮಾದ ಕಾಮಿಡಿ ದೃಶ್ಯಗಳನ್ನು ನೋಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಕೊಟ್ಟಪಲ್ಲಿಯ ಅನಂತಲಕ್ಷ್ಮಿ (55) ಎಂಬುವವರಿಗೆ ಕಾಕಿನಾಡ ಸರ್ಕಾರಿ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್ ಸರ್ಜರಿ ಮಾಡಲಾಗುತ್ತಿತ್ತು. ಈ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಅನಂತಲಕ್ಷ್ಮಿ ಎಚ್ಚರವಿರಬೇಕಿತ್ತು ಹಾಗೂ ಗಾಬರಿ ಆಗದಂತೆ ಸಾಮಾನ್ಯ ಸ್ಥಿತಿಯಲ್ಲಿ ಇರುವುದು ಮುಖ್ಯವಾಗಿತ್ತು. ಇದೇ ಕಾರಣಕ್ಕೆ 55 ವರ್ಷದ ಅನಂತಲಕ್ಷ್ಮಿ ಜೂ ಎನ್ಟಿಆರ್ ಅಭಿಮಾನಿಯಾಗಿದ್ದು, ಮೆದುಳು ಶಸ್ತ್ರಚಿಕಿತ್ಸೆ ಸಮಯದಲ್ಲಿ ಜೂ ಎನ್ಟಿಆರ್ ನಟನೆಯ ಸೂಪರ್ ಹಿಟ್ ಸಿನಿಮಾದ ಕಾಮಿಡಿ ದೃಶ್ಯಗಳನ್ನು ವೀಕ್ಷಿಸಿದ್ದಾರೆ.
ಈಸ್ಟ್ ಗೋಧಾವರಿ ಜಿಲ್ಲೆಯ ಅನಂತಲಕ್ಷ್ಮಿ ಅವರಿಗೆ ಮೆದುಳಿನಲ್ಲಿ ಟ್ಯೂಮರ್ ಆಗಿತ್ತು. ಅವರಿಗೆ ಪದೇ ಪದೇ ತಲೆ ನೋವು ಬರುವುದು, ನಡೆಯುವಾಗ ಸಮತೋಲನ ತಪ್ಪುವುದು ಆಗುತ್ತಿತ್ತು. ಪರೀಕ್ಷೆ ಮಾಡಿದಾಗ ಮಹಿಳೆಯ ಮೆದುಳಿನ ಎಡಭಾಗದಲ್ಲಿ 2.7*3.3 ಸೆಂಟಿಮೀಟರ್ ಗಾತ್ರದ ಟ್ಯೂಮರ್ ಪತ್ತೆಯಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆಂಬ ಕಾರಣಕ್ಕೆ ಈಸ್ಟ್ ಗೋಧಾವರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ರೋಗಿಗೆ ವಯಸ್ಸು ಹೆಚ್ಚಾಗಿದ್ದು, ಶಸ್ತ್ರಚಿಕಿತ್ಸೆ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದೇ ಇದ್ದ ಕಾರಣ, ರೋಗಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ಎಚ್ಚರದಿಂದ ಹಾಗೂ ಸಾಮಾನ್ಯ ಸ್ಥಿತಿಯಲ್ಲಿರಲು ಅವರದ್ದೇ ಕೋರಿಕೆಯಂತೆ ಜೂ ಎನ್ಟಿಆರ್ ಸಿನಿಮಾದ ಕಾಮಿಡಿ ದೃಶ್ಯಗಳನ್ನು ಪ್ರದರ್ಶಿಸಲಾಗಿತ್ತು.