Milk | ಕರ್ನಾಟಕದ ಪ್ರಮುಖ ಬ್ರ್ಯಾಂಡ್ ಆಗಿರುವ ಕೆಎಂಎಫ್ ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು, ಇತ್ತೀಚೆಗೆ ದೆಹಲಿಗೂ ಕೂಡ ಕಾಲಿಟ್ಟಿದೆ. ಇದರ ಬೆನ್ನಲ್ಲೇ ಉತ್ತರ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಕೆಎಂಎಫ್ ಹರಿಯಾಣಕ್ಕೂ ‘ನಂದಿನಿ’ ಹಾಲನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.
ಉತ್ತರ ಭಾರತದ ವ್ಯಾಪ್ತಿಯಲ್ಲಿ ನಂದಿನಿ ಹಾಲು ಮಾರಾಟದ ಜಾಲವನ್ನು ಮತ್ತಷ್ಟು ಸದೃಢಗೊಳಿಸಲು ಕೆಎಂಎಫ್ ನಿರ್ಧಾರ ಮಾಡಿದೆ. ಈ ಬಗ್ಗೆ ಕೆಎಂಎಫ್‌ನ ಉತ್ತರ ಭಾರತದ ಮುಖ್ಯಸ್ಥ ಅಮಿತ್ ಸಿಂಗ್ ಮಾತನಾಡಿದ್ದು, ಇದಕ್ಕೆ ಪೂರಕವಾಗಿ ವಿತರಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ, ಮೊದಲ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ನಂದಿನಿ ಹಸುವಿನ ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಒತ್ತು ನೀಡಲಾಗಿದೆ. ಗ್ರಾಹಕರಲ್ಲಿ ಅರಿವು ಮೂಡಿಸಲು ‘ಹರ್ ಘರ್ ನಂದಿನಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಸ್ನಿ ಸ್ಥಾವರದಲ್ಲಿ ನಂದಿನಿ ಹಸುವಿನ ಹಾಲನ್ನು ಸಹ-ಪ್ಯಾಕ್ ಮಾಡಲಾಗುತ್ತದೆ. ಇದು ದಿನಕ್ಕೆ 1.50 ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದ್ದು, ಹರಿಯಾಣ ಸಹಕಾರಿ ಒಕ್ಕೂಟದ ರೋಹ್ಟಕ್ ಸ್ಥಾವರದಲ್ಲಿ ದಿನಕ್ಕೆ 1 ಲಕ್ಷ ಲೀಟರ್ ಸಂಸ್ಕರಣಾ ಮತ್ತು ಪ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ.