ಸಿದ್ಧ ಉಡುಪು, ಕರಕುಶಲ ವಸ್ತುಗಳು, ಚರ್ಮೋತ್ಪನ್ನಗಳ ರಫ್ತು ಆರ್ಡರ್​ ಶೇ.75 ರದ್ದು, 30 ಸಾವಿರ ಕೋಟಿ ರೂ. ಪರಿಹಾರಕ್ಕೆ ಕೇಂದ್ರಕ್ಕೆ ಮನವಿ

exports
Published on

ನವದೆಹಲಿ: ಕೋವಿಡ್​ 19 ಸೋಂಕು ಭಾರತದ ರಫ್ತು ವಹಿವಾಟಿನ ಮೇಲೂ ಕರಿನೆರಳು ಬೀರಿದೆ. ವಿಶ್ವದಾದ್ಯಂತ ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ ಭಾರತೀಯ ಸಿದ್ಧ ಉಡುಪು, ಚರ್ಮೋದ್ಯಮ, ಕರಕುಶಲ ವಸ್ತುಗಳು ಮತ್ತು ನೆಲಹಾಸುಗಳ ರಫ್ತು ಆರ್ಡರ್ ಶೇ.75 ರದ್ದಾಗಿದೆ.

ಅಷ್ಟೇ ಅಲ್ಲ, ರಾಷ್ಟ್ರದ ಒಟ್ಟಾರೆ ರಫ್ತು ಆದೇಶದಲ್ಲಿ ಶೇ. 50 ಆರ್ಡರ್​ಗಳು  ರದ್ದಾಗಿವೆ. ಈ ಹಿನ್ನೆಲೆಯಲ್ಲಿ ರಫ್ತು ಉದ್ಯಮಕ್ಕೆ 30 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಭಾರತೀಯ ರಫ್ತುದಾರರ ಮಹಾಒಕ್ಕೂಟ (ಫೆಡರೇಷನ್​ ಆಫ್​ ಇಂಡಿಯನ್​ ಎಕ್ಸ್​ಪೋರ್ಟರ್ಸ್-ಎಫ್​ಐಇ​) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ರಫ್ತು ಆರ್ಡರ್​ಗಳು ಬಹುತೇಕ ಅಮೆರಿಕ ಮತ್ತು ಬ್ರಿಟನ್​ನಿಂದ ಬಂದಿದ್ದವು. ಆದರೆ ಈಗ ಆ ದೇಶಗಳು ಕರೊನಾ ಪಿಡುಗಿನ ಕಪಿಮುಷ್ಟಿಗೆ ಸಿಲುಕಿವೆ. ಆದ್ದರಿಂದ, ಆ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ, ರಫ್ತು ಆರ್ಡರ್​ಗಳು ರದ್ದುಗೊಂಡಿವೆ.

ರಫ್ತು ಆರ್ಡರ್​ಗಳು ರದ್ದುಗೊಂಡಿರುವ ಹಿನ್ನೆಲೆಯಲ್ಲಿ ರಫ್ತು ಉದ್ಯಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸಿಬ್ಬಂದಿಗೆ ವೇತನ ಮತ್ತಿತರ ಭತ್ಯೆ, ದಿನಗೂಲಿ, ಬಾಡಿಗೆ ಮತ್ತು ವಿದ್ಯುತ್​ ಶುಲ್ಕ ಪಾವತಿಗೂ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ, ಉದ್ಯಮಕ್ಕೆ ಸೂಕ್ತ ಪರಿಹಾರ ನೀಡಿ ಸಹಕರಿಸಬೇಕು ಎಂದು ಎಫ್​ಐಇ ಮನವಿ ಮಾಡಿಕೊಂಡಿದೆ.

ರಫ್ತು ಕುಸಿತದಿಂದ ಬಳಲಿರುವ ಚೀನಾ ಕೂಡ ರಫ್ತು ಉದ್ಯಮದ ಪುನಶ್ಚೇತನಕ್ಕೆ ರಫ್ತು ತೆರಿಗೆ ಮೇಲೆ ಶೇ.3 ಹೆಚ್ಚುವರಿ ವಿನಾಯ್ತಿ ಘೋಷಿಸಿದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net