

ಲಂಡನ್: ಕರೊನಾ ವೈರಸ್ ಎಂದ ಕೂಡಲೇ ದುಂಡಗಿನ, ಮೈತುಂಬ ಮುಳ್ಳನ್ನೇ ಹೊದ್ದುಕೊಂಡಿರುವ, ಆ ಮುಳ್ಳಿನ ತುದಿಯಲ್ಲಿ ಕಿರೀಟದಂತೆ ರಚನೆಯಿರುವ ಚಿತ್ರವನ್ನು ಎಲ್ಲ ಮಾಧ್ಯಮಗಳಲ್ಲೂ ತೋರಿಸಲಾಗುತ್ತದೆ.
ಆದರೆ, ಈ ವೈರಸ್ ದೇಹ ಸೇರಿಕೊಳ್ಳುವುದು ಹೇಗೆ? ಬಳಿಕ ಅಲ್ಲಿನ ಪ್ರತಿರೋಧಕ ಶಕ್ತಿಯನ್ನು ಅಥವಾ ರೋಗ ನಿರೋಧಕ ಶಕ್ತಿಯನ್ನು ಹೇಗೆ ಬೇಧಿಸುತ್ತದೆ ಅಥವಾ ಕಾಯಿಲೆಯ ಯಾವುದೇ ಗುಣಲಕ್ಷಣಗಳನ್ನು ತೋರಿಸದೇ ಅಲ್ಲಿಯೇ ಹೇಗೆ ಉಳಿದುಕೊಳ್ಳುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಬ್ರಿಟನ್ನಿನ ಸೌತ್ ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದರ ಮೂರು ಆಯಾಮಗಳ (ತ್ರೀಡಿ) ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. 'ಕುರಿಯ ವೇಷ ಧರಿಸಿ ದೇಹ ಪ್ರವೇಶಿಸುವ ತೋಳ' ಎಂದು ಕರೊನಾ ವೈರಸ್ಅನ್ನು ಬಣ್ಣಿಸಿದ್ದಾರೆ.
ಇಷ್ಟಕ್ಕೂ ದೇಹದಲ್ಲಿ ಈ ವೈರಸ್ ಅವಿತಿರುವುದು ಗೊತ್ತಾಗದೇ ಇರಲು ಕಾರಣ ತನ್ನ ಮೇಲ್ಮೈಗೆ ಸಕ್ಕರೆ ಮಾಲಿಕ್ಯೂಲ್ಗಳನ್ನು ಈ ವೈರಸ್ ಅಂಟಿಸಿಕೊಂಡಿರುತ್ತದೆ. ಹೀಗಾಗಿ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬೇಧಿಸಿ ಪ್ರವೇಶಿಸಲು ಇದಕ್ಕೆ ಸಾಧ್ಯವಾಗುತ್ತದೆ. ಸಾರ್ಸ್-ಸಿಒವಿ-2 ಎಂದು ಕರೆಯಲಾಗುವ ಈ ವೈರಸ್ ಎಚ್ಐವಿ ಹಾಗೂ ಇತರ ವೈರಸ್ಗಳಷ್ಟು ನಿಗೂಢವೇನಲ್ಲ. ಸದ್ಯ ಇದರ ಸ್ವರೂಪದ ಬಗ್ಗೆ ತಿಳಿದುಬಂದಿರುವುದರಿಂದ ಆಗಿರುವ ಬಹುದೊಡ್ಡ ಪ್ರಯೋಜನವೆಂದರೆ ಇದನ್ನು ಮಣಿಸಲು ಔಷಧ ಕಂಡುಹಿಡಿಯುವಲ್ಲಿ ಈ ಸಂಶೋಧನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅನ್ವೇಷಕರು ಹೇಳಿದ್ದಾರೆ.
ಇಡೀ ಜಗತ್ತೇ ಪ್ರಸ್ತುತ ಕರೊನಾ ಕಪಿಮುಷ್ಠಿಗೆ ಸಿಲುಕಿದೆ. ಈ ಹೊತ್ತಿನಲ್ಲಿ ಇದರ ಬಗ್ಗೆ ಹೊಸ ವಿಷಯಗಳು ಗೊತ್ತಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಮಾನವ ದೇಹದ ಪ್ರತಿರೋಧಕ ಶಕ್ತಿಯಿಂದ ಈ ವೈರಸ್ ಯಾವ ರೀತಿ ಅವಿತುಕೊಳ್ಳುತ್ತದ ಎಂಬುದನ್ನು ಇದರ ತ್ರೀಡಿ ಚಿತ್ರದ ಮೂಲಕ ವಿಜ್ಞಾನಿಗಳು ವಿಶದವಾಗಿ ವಿವರಿಸಿದ್ದಾರೆ. ಇಂಥದ್ದೊಂದು ಸಂಶೋಧನೆ ಇದೇ ಮೊದಲ ಬಾರಿಗೆ ನಡೆದಿದೆ.
ದೇಹದಲ್ಲಿ ಅವಿತುಕೊಳ್ಳುವುದು ಹೇಗೆ?: ಸಾರ್ಸ್-ಸಿಒವಿ-2 ಎಂದು ಕರೆಯಲಾಗುವ ಈ ವೈರಸ್ ಮುಳ್ಳಿನ ರಚನೆಗಳನ್ನು ಹೊಂದಿದೆ. ಇವುಗಳಿಂದಲೇ ಅದು ಜೀವಕೋಶಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಪ್ರವೇಶ ಮಾಡುತ್ತದೆ. ಈ ಮುಳ್ಳುಗಳಿಗೆ ಸಕ್ಕರೆ ಹೊದಿಕೆಯಿರುತ್ತದೆ. ಇದನ್ನು ಗ್ಲೈಕಾನ್ ಎಂದು ಕರೆಯಲಾಗುತ್ತದೆ. ಇದು ದೇಹದ ಪ್ರತಿಬಂಧಕ ಶಕ್ತಿಯನ್ನು ವಂಚಿಸಿ, ಒಳಗೆ ಪ್ರವೇಶಿಸಲು ಸಹಾಯ ಮಾಡುತ್ತವೆ. ಆದರೆ, ಇದರ ಪ್ರಮಾಣ ಕಡಿಮೆಯಿರುತ್ತದೆ. ಹೀಗಾಗಿ ಇದನ್ನು ನಿವಾರಣೆ ಮಾಡುವುದು ಕಷ್ಟವೇನಲ್ಲ ಎನ್ನುತ್ತಾರೆ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ.ಮ್ಯಾಕ್ಸ್ ಕ್ರಿಸ್ಪಿನ್. ಎಚ್ಐವಿಗೆ ಲಸಿಕೆ ತಯಾರಿಸುವ ಸಂಶೋಧನೆಗಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಈ ಹಿಂದೆ ನೀಡಿದ್ದ ಅನುದಾನದಿಂದ ಖರೀದಿಸಲಾಗಿದ್ದ ಸಾಧನಗಳನ್ನು ಬಳಸಿ ಈ ಸಂಶೋಧನೆಯನ್ನು ಮಾಡಿರುವುದು ವಿಶೇಷ.