

ಚಿಕ್ಕಬಳ್ಳಾಪುರ: ಮನೆಯಲ್ಲಿ ಯಾರಿಗೇ ಒಬ್ಬರಿಗೆ ಸೋಂಕು ತಗುಲಿದರೂ ಮನೆಮಂದಿಯೆಲ್ಲಾ ಕ್ವಾರಂಟೈನ್ನಲ್ಲಿ ಇರಬೇಕಾದುದು ನಿಯಮ. ಇದನ್ನು ಉಲ್ಲಂಘಿಸುವಂತೆಯೇ ಇಲ್ಲ.
ಆದರೆ ಚಿಕ್ಕಬಳ್ಳಾಪುರದ ಹೋಟೆಲ್ ಮಾಲೀಕರೊಬ್ಬರು ತಮ್ಮ ಮಗನಿಗೆ ಕರೊನಾ ಸೋಂಕು ತಗುಲಿದ್ದರೂ ಹೋಟೆಲ್ ಓಪನ್ ಮಾಡಿ ಇದೀಗ ಗ್ರಾಹಕರನ್ನು ಪೇಚಿಗೆ ಸಿಲುಕಿಸಿದ್ದಾರೆ.
ಈ ಮಾಲೀಕರ ಮಗನಿಗೆ ಸೋಂಕು ದೃಢಪಟ್ಟಿದ್ದರಿಂದ ನಿನ್ನೆ ಅಂದರೆ ಶನಿವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗನ ಸಂಪರ್ಕಕ್ಕೆ ಬಂದಿರುವ ತಂದೆ ಮತ್ತು ತಾಯಿ ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕು. ಏಕೆಂದರೆ ಇವರು ಪ್ರಥಮ ಸಂಪರ್ಕಿತರು. ಇಷ್ಟೇ ಅಲ್ಲದೇ ಸೋಂಕಿತ ವ್ಯಕ್ತಿಯ ಇತರ ಕುಟುಂದವರೂ ಕ್ವಾರಂಟೈನ್ ಆಗಬೇಕು. ಈ ಕುರಿತು ಅಧಿಕಾರಿಗಳು ಈ ಕುಟುಂಬಕ್ಕೆ ಹೇಳಿಹೋಗಿದ್ದರು ಕೂಡ.
ಆದರೆ ಅಧಿಕಾರಿಗಳ ಮಾತಿಗೆ ಕ್ಯಾರೇ ಎನ್ನದೇ ಹೋಟೆಲ್ ಮಾಲೀಕ ಹೋಟೆಲ್ ತೆರೆದದ್ದು ಮಾತ್ರವಲ್ಲದೇ, ಅನೇಕ ಗ್ರಾಹಕರಿಗೂ ಆಹಾರ ಪೂರೈಕೆ ಮಾಡಿದ್ದಾರೆ.
ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಹೋಟೆಲ್ ಬಳಿ ದೌಡಾಯಿಸಿ, ಹೋಟೆಲ್ನ್ನು ಕೂಡಲೇ ಸೀಲ್ಡೌನ್ ಮಾಡಿದ್ದೂ ಅಲ್ಲದೇ, ಸೋಂಕಿತನ ಮನೆಯನ್ನೂ ಸೀಲ್ಡೌನ್ ಮಾಡಿ, ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್ ಆಗುವಂತೆ ಹೇಳಿ ಹೋಗಿದ್ದಾರೆ.
ಇವರೇನೋ ಕ್ವಾರಂಟೈನ್ ಆದರು. ಅದರೆ ಹೋಟೆಲ್ನಲ್ಲಿ ತಿಂಡಿ ತಿಂದವರ ಗತಿ?