

ಘಾಜಿಯಾಬಾದ್: ಹರಿಯಾಣದ ಗುರುಗ್ರಾಮ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ ನಂತರ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಿನ್ನೆ (ಜನವರಿ 01) ನಡೆದಿದೆ.
ಮೃತ ವ್ಯಕ್ತಿಯನ್ನು ಗೌರವ್ ಶರ್ಮ ಎಂದು ಗುರುತಿಸಲಾಗಿದೆ. ತನ್ನ ಪತ್ನಿ ಲಕ್ಷ್ಮೀ ರಾವತ್ಳನ್ನು ಕೊಲೆ ಮಾಡಿ, ತಾನೂ ಸಾವನ್ನಪ್ಪಿದ್ದಾನೆ. ದಂಪತಿ ಗುರುಗ್ರಾಮದ ಡಿಎಲ್ಎಫ್ ಫೇಸ್ 3 ಏರಿಯಾದ ಎಸ್ ಬ್ಲಾಕ್ನ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ಇದ್ದರು. ಉತ್ತರ ಪ್ರದೇಶದ ಆಗ್ರಾ ಮೂಲದ ಗೌರವ್ ಶರ್ಮ, ಸೋಮವಾರ ಬೆಳಗ್ಗೆ 10.30ಕ್ಕೆ ಘಾಜಿಯಾಬಾದ್ನ ಕೌಶಂಬಿ ಮೆಟ್ರೋ ನಿಲ್ದಾಣಕ್ಕೆ ತೆರಳಿ, ಕಟ್ಟದಿಂದ ಕೆಳಗೆ ಜಿಗಿದು ಮೃತಪಟ್ಟಿದ್ದಾನೆ.
ಡಿ.31ರಂದು ಗುರುಗ್ರಾಮದಲ್ಲಿರುವ ಮನೆಯಲ್ಲಿ ತನ್ನ ಪತ್ನಿಯನ್ನು ಕೊಂದು, ಗೌರವ್ ಶರ್ಮ ಎಸ್ಕೇಪ್ ಆಗಿದ್ದ. ಮಾರನೇ ದಿನ ಆತನು ಕೂಡ ಸಾವಿಗೀಡಾಗಿದ್ದಾರೆ. ದಂಪತಿ 6 ತಿಂಗಳ ಹಿಂದಷ್ಟೇ ಬಾಡಿಗೆ ಮನೆಗೆ ಸ್ಥಳಾಂತರವಾಗಿದ್ದರು. ಗೌರವ್ ಶರ್ಮ ಕಟ್ಟಡದಿಂದ ಜಿಗಿಯುವ ದೃಶ್ಯ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ 1ರಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೆಟ್ರೋ ರೈಲು ಕೌಶಂಬಿ ನಿಲ್ದಾಣದಿಂದ ಘಾಜಿಯಾಬಾದ್ ನೀಲಿ ರೇಖೆಯ ಕೊನೆಯ ನಿಲ್ದಾಣ ವೈಶಾಲಿ ಕಡೆ ತೆರಳಿದ ಬೆನ್ನಲ್ಲೇ ಗೌರವ್ ಶರ್ಮ ಕಡ್ಡದಿಂದ ಕೆಳಗಡೆ ಜಿಗಿದಿದ್ದಾನೆ.
ಕೌಶಂಬಿ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ ಜನವಸತಿ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಪ್ಲಾಟ್ಫಾರ್ಮ್ನಿಂದ ಜಿಗಿದ ಗೌರವ್ ಶರ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೆಟ್ರೋ ನಿಲ್ದಾಣದ ಪಕ್ಕದ ಸರ್ವಿಸ್ ಲೇನ್ನಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಬಿದ್ದ ರಭಸಕ್ಕೆ ದೇಹ ಛಿದ್ರಗೊಂಡು ರಸ್ತೆಯಲ್ಲೆಲ್ಲ ರಕ್ತದ ಕಲೆಗಳು ಅಂಟಿಕೊಂಡಿವೆ.
30 ವರ್ಷದ ಗೌರವ್ ಶರ್ಮ, ತನ್ನ ಹೆಂಡತಿಯನ್ನು ಕೊಲೆ ಮಾಡಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಾಹಿತಿ ತಿಳಿದು ಗುರುಗ್ರಾಮ್ ಪೊಲೀಸರು ಮನೆಗೆ ಹೋದಾಗ ದಂಪತಿಯ 1 ವರ್ಷದ ಮಗು ತಾಯಿಯ ಶವದ ಪಕ್ಕದಲ್ಲಿ ಅಳುತ್ತಿರುವ ಮನಕಲಕುವ ಹಾಗೂ ಕಣ್ಣಲ್ಲಿ ನೀರು ತರಿಸುವ ದೃಶ್ಯ ಕಂಡುಬಂದಿತು. ಹೆಂಡತಿಯ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಿ, ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾನೆ. ಅಲ್ಲದೆ, ತನ್ನ ಮಗನಿಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರವ್ ಶರ್ಮನನ್ನು ಬಂಧಿಸಲು ಗುರುಗ್ರಾಮ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು ಆದರೆ, ಗುರುಗ್ರಾಮ್ನಿಂದ 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಕೌಶಂಬಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣವೇನು ಎಂದು ತಿಳಿಯಲು ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)