ಮಾತು ಬಾರದ ತಂದೆಗೆ ಧ್ವನಿಯಾದ ಮಗಳು: ವೈರಲ್​ ವಿಡಿಯೋ ನೋಡಿದ್ರೆ ನಿಮ್ಮ ಮನಕಲಕುವುದು ಖಚಿತ! Father and Daughter Love

Father and Daughter Love
Published on

ಪಾಣಿಪತ್​ : ಅಪ್ಪ-ಮಗಳ ( Father and Daughter Love ) ಸಂಬಂಧವನ್ನು ವರ್ಣಿಸಲು ಪದಗಳೇ ಸಾಲದು. ಅದೊಂದು ಮಧುರ ಬಾಂಧವ್ಯ. ಎಂದೂ ಮುರಿಯದ ಅನುಬಂಧ. ತಂದೆಯಾದವನಿಗೆ ಮಗನಿಗಿಂತ ಮಗಳೆಂದರೆ ತುಂಬಾ ಪ್ರೀತಿ. ಮಗಳಿಗಾಗಿ ಯಾವುದೇ ತ್ಯಾಗಕ್ಕೂ ತಂದೆ ಸಿದ್ಧನಿರುತ್ತಾನೆ. ಮಗಳು ಹುಟ್ಟಿನಿಂದ ಆಕೆಯ ಮದುವೆಯಂತಹ ಜವಾಬ್ದಾರಿವರೆಗೂ ಒಂದು ಚೂರ ಕೊರತೆಯಾಗದಂತೆ ನೋಡಿಕೊಳ್ಳಲು ತಂದೆ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ. ಮದುವೆ ಮಾಡಿ ಕೊಟ್ಟಾಗ ತಾಯಿ ಕಣ್ಣೀರು ಹಾಕುತ್ತಾಳೋ ಇಲ್ಲವೋ? ಆದರೆ, ತಂದೆ ಮಾತ್ರ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವ ಮುನ್ನ ಕಣ್ಣೀರು ಹಾಕುತ್ತಾನೆ. ಅದೇ ರೀತಿ ಮಗಳಿಗೂ ತಂದೆ ಎಂದರೆ ತನ್ನ ಜೀವನದ ಮೊದಲು ಹೀರೋ. ತಾಯಿಗಿಂತ ಹೆಚ್ಚು ತಂದೆಯನ್ನು ಪ್ರೀತಿ ಮಾಡುತ್ತಾಳೆ. ತಂದೆಯ ನೋವು ಮರೆಸುವಂತಹ ಶಕ್ತಿ ಮಗಳಲ್ಲಿರುತ್ತದೆ.

ತಾಜಾ ಸಂಗತಿ ಏನೆಂದರೆ, ಮಾತು ಬಾರದ ತನ್ನ ತಂದೆಗೆ ಅಂಗಡಿ ನಡೆಸಲು ಮಗಳು ಸಹಾಯ ಮಾಡುವಂತಹ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹರಿಯಾಣದ ಪಾಣಿಪತ್‌ ಮೂಲದ ಈ ವಿಡಿಯೋ ನೆಟ್ಟಿಗರ ಕಣ್ಣಂಚಲ್ಲಿ ನೀರು ತರಿಸಿದೆ. ವಿಡಿಯೋದಲ್ಲಿ ತಂದೆ ಮತ್ತು ಮಗಳ ನಡುವಿನ ಪ್ರೀತಿ ಮತ್ತು ಕಾಳಜಿಯ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೋ ನೋಡಿದವರ ಮನಕಲಕುವುದು ಗ್ಯಾರಂಟಿ ಎನ್ನಬಹುದು.

ಪಾಣಿಪತ್‌ನ ಹಳೆಯ ಬಸ್ ನಿಲ್ದಾಣದ ಬಳಿ ತಂದೆ ಮತ್ತು ಮಗಳು ಅಂಗಡಿ ನಡೆಸುತ್ತಿರುವಾಗ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಮಾತನಾಡಲು ಸಾಧ್ಯವಾಗದ ತಂದೆಯೊಬ್ಬರು ತಮ್ಮ ಮಗಳಿಗೆ ಸನ್ನೆಗಳ ಮೂಲಕ ಸರಕುಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಾರೆ. ಇದನ್ನು ಅರ್ಥಮಾಡಿಕೊಂಡ ಮಗಳು ಅಂಗಡಿಗೆ ಬರುವ ಗ್ರಾಹಕರೊಂದಿಗೆ ಮಾತನಾಡುತ್ತಾಳೆ ಮತ್ತು ವ್ಯವಹಾರವನ್ನು ಸುಗಮಗೊಳಿಸುತ್ತಾಳೆ.

ತಂದೆಗೆ ಮಾತನಾಡಲು ಸಾಧ್ಯವಾಗದಿದ್ದರೂ, ಮಗಳು ಪ್ರತಿದಿನ ಅಂಗಡಿಯನ್ನು ನಡೆಸಲು ತಂದೆಗೆ ಸಹಾಯ ಮಾಡುತ್ತಾಳೆ. ಅಂಗಡಿಯು ಪಾಣಿಪತ್‌ನ ಹಳೆಯ ಬಸ್ ನಿಲ್ದಾಣದ ಸುಖದೇವ್ ನಗರದ ಗೇಟ್ 1 ಬಳಿಯ ಪ್ರವೀಣ್ ಮೆಡಿಕಲ್ ಎದುರು ಇದೆ. ಯಾರಾದರೂ ಅದರ ಹತ್ತಿರ ಇದ್ದರೆ, ದಯವಿಟ್ಟು ಅವರ ಅಂಗಡಿಯಲ್ಲಿ ಏನಾದರೂ ಖರೀದಿಸಿ. ನೀವು ಅವರಿಗೆ ಮಾಡುವ ಸಣ್ಣ ಸಹಾಯವೂ ಒಂದು ದೊಡ್ಡ ವಿಷಯ ಎಂದು ವಕೀಲ ಹೋಮಿ ದೇವಾಂಗ್ ಕಪೂರ್ ಎಂಬುವರು ವಿಡಿಯೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಅನೇಕ ಜನರು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

ಭಾಷೆಯು ಜೀವನೋಪಾಯಕ್ಕೆ ಅಡ್ಡಿಯಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ನಾನಿಂದು ಅವರ ಅಂಗಡಿಯಿಂದ ಖರೀದಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಜನರು ಅವರ ಸ್ಥಿತಿಯನ್ನು ನೋಡಿದರೂ ಚೌಕಾಶಿ ಮಾಡಲು ಪ್ರಯತ್ನಿಸುವುದನ್ನು ನೋಡುವುದು ದುಃಖಕರವಾಗಿದೆ. ರಸ್ತೆಬದಿಯಲ್ಲಿ ಮಾರಾಟ ಮಾಡುವವರಿಗೆ ಮತ್ತು ಹಬ್ಬಗಳ ಸಮಯದಲ್ಲೂ ಕೆಲಸ ಮಾಡುವವರ ಮೇಲೆ ದಯೆಯಿರಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮಗು ತನ್ನ ತಂದೆಯ ದೇವತೆ ಅಂತಾನೂ ಕೆಲವರು ಕಾಮೆಂಟ್​ ಮಾಡಿದ್ದಾರೆ. ವಕೀಲರು ಹಂಚಿಕೊಂಡ ವಿಡಿಯೋವನ್ನು ಈವರೆಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net