

ನವದೆಹಲಿ: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಣೆ ಕಾಯ್ದೆ) ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ತ್ವರಿತ ನ್ಯಾಯಾಲಯಗಳಲ್ಲಿ 2023 ಜನವರಿ 31ರವರೆಗೆ ದೇಶದಲ್ಲಿ 2,43,237 ಪ್ರಕರಣಗಳು ಬಾಕಿ ಉಳಿದಿವೆ ಎಂದು ಭಾರತೀಯ ಮಕ್ಕಳ ರಣಾ ನಿಧಿಯು ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ.
ಈ ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡಲು ಕನಿಷ್ಠ 9 ವರ್ಷಗಳು ಬೇಕಾಗುತ್ತದೆ. ಅರುಣಾಚಲ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಪೋಕ್ಸೊ ಪ್ರಕರಣಗಳನ್ನು ಪರಿಹರಿಸಲು 25 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. 2022ರಲ್ಲಿ ಕೇವಲ ಮೂರು ಪ್ರತಿಶತ ಪೋಕ್ಸೊ ಪ್ರಕರಣಗಳಲ್ಲಿ ಶಿಕ್ಷೆಯನ್ನು ನೀಡಲಾಗಿದೆ ಎಂದು ಅಧ್ಯಯನವು ತಿಳಿಸಿದೆ.
2019ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ತ್ವರಿತಗತಿಯ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಯಿತು. ಇದನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ 2026 ರವರೆಗೆ ಮುಂದುವರಿಸಲು 1900 ಕೋಟಿ ರೂಪಾಯಿಗಳ ಬಜೆಟ್ ಮೊತ್ತವನ್ನು ನಿಗದಿಪಡಿಸಲು ಭಾರತ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡಿದೆ.