ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ: ಅರಿಯಡ್ಕ ಕೃಷಿಕರ ಸಭೆಯಲ್ಲಿ ಆಗ್ರಹ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ

New Project
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಕಾಡಾನೆ ಉಪಟಳ ಜಾಸ್ತಿಯಾಗುತ್ತಿದ್ದು, ಕೃಷಿ ಹಾಳಾಗುತ್ತಿದೆ. ವಾಸ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಈ ತನಕ ಕೃಷಿ ಹಾನಿಯಾದ ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ನಿರಂತರವಾಗಿ ಕಾಡಾನೆಗಳು ಬಂದು ಕೃಷಿ ನಾಶ ಮಾಡುತ್ತಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿದೆ. ದಯವಿಟ್ಟು ಕಾಡಾನೆಗಳನ್ನು ಜನವಸತಿ ಪ್ರದೇಶದಿಂದ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕೊಡಿ...

-ಇದು ಮಾಡ್ನೂರು ಗ್ರಾಮದ ಕಾವು ಸಮುದಾಯ ಭವನದಲ್ಲಿ ಕಾಡಾನೆ ಹಾವಳಿಗೆ ಸಂಬಂಧಿಸಿ ಗುರುವಾರ ಅರಿಯಡ್ಕ ಗ್ರಾಪಂ ವತಿಯಿಂದ ನಡೆದ ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಕೃಷಿಕರ ಸಭೆಯಲ್ಲಿ ಕೃಷಿಕರಿಂದ ವ್ಯಕ್ತವಾದ ಅಳಲು ಮತ್ತು ಆಗ್ರಹ.

ಕಾಡಾನೆ ಹಾವಳಿ ಕುರಿತು ಈಗಾಗಲೇ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಅರಣ್ಯ ಇಲಾಖಾಧಿಕಾರಿಗಳು ಬಂದು ಕಾಡಾನೆ ಓಡಿಸುವ ಕೆಲಸ ಮಾಡುತ್ತಾರೆ. ಆದರೆ ಕಾಡಾನೆ ಮತ್ತೆ ಮತ್ತೆ ಊರಿಗೆ ಕಾಲಿಡುತ್ತಿವೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದರು. ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ, ಸ್ಥಳೀಯ ಶಾಸಕರಿಗೆ ಮನವಿ ಮಾಡುವುದೆಂದು ನಿರ್ಣಯ ಕೈಗೊಳ್ಳಲಾಯಿತು.

ಕಾಡಾನೆಗಳನ್ನು ಈ ಭಾಗಕ್ಕೆ ಎಲ್ಲಿಂದಲೋ ತಂದು ಬಿಟ್ಟಿದ್ದಾರೆಯೋ ಎಂಬ ಅನುಮಾನವಿದ್ದು, ಈ ಬಗ್ಗೆ ತನಿಖೆಯಾಗಬೇಕು. ಕಾಡಾನೆ ದಾಳಿಯಿಂದಾಗಿ ಕೃಷಿ ನಾಶವಾಗಿದ್ದರೆ ಈ ಹಿಂದೆ ಪರಿಹಾರ ಸಿಗುತ್ತಿತ್ತು. ಈಗ ಅದು ಕೂಡ ಸಿಗುತ್ತಿಲ್ಲ ಎಂದು ಪ್ರಶಸ್ತಿ ಪುರಸ್ಕೃತ ಕೃಷಿಕ ಕುಮಾರ್ ಪೆರ್ನಾಜೆ ದೂರಿದರು. ಪ್ರಗತಿಪರ ಕೃಷಿಕ ಲೋಕೇಶ್ ಚಾಕೋಟೆ, ಕೃಷಿಕ ಶರತ್‌ಕುಮಾರ್ ರೈ ಕಾವು, ನಿರ್ಮಲಾ ಕುಮಾರಿ ಪೂವಂದೂರು ವಿವಿಧ ಸಮಸ್ಯೆಗಳನ್ನು ತಿಳಿಸಿದರು.

ಪಂಚಾಯಿತಿ ವತಿಯಿಂದ ಸಾಧ್ಯವಿರುವ ಎಲ್ಲ ಕೆಲಸ ಮಾಡಿದ್ದೇವೆ. ಆದರೆ ಕಾಡಾನೆ ಸ್ಥಳಾಂತರ ಕಾರ್ಯವನ್ನು ಅರಣ್ಯ ಇಲಾಖೆ, ಸರ್ಕಾರವೇ ಮಾಡಬೇಕಾಗಿದೆ ಎಂದು ಪಂಚಾಯಿತಿ ಕಾರ್ಯದರ್ಶಿ ವಿದ್ಯಾಧರ್ ತಿಳಿಸಿದರು.

ಕಾಡಾನೆ ಹಾವಳಿ ತಡೆಗೆ ಬೇಕಾದ ಕಂದಕ ನಿರ್ಮಾಣ, ಸೋಲಾರ್ ಬೇಲಿ ರಚನೆ ಮೊದಲಾದ ಅಗತ್ಯ ಕ್ರಮ ಸರ್ಕಾರ ಕೈಗೊಳ್ಳಬೇಕಿದೆ. ಕೃಷಿ ಹಾನಿಗೆ ಪರಿಹಾರ ಪಡೆಯುವ ನಿಟ್ಟಿನಲ್ಲಿ ಕಾನೂನು ರೀತಿಯ ಹೋರಾಟದ ಅನಿವಾರ್ಯತೆ ಇದೆ. ಸರ್ಕಾರಕ್ಕೆ ಮನವರಿಕೆ ಮಾಡುವ ಅಗತ್ಯವೂ ಇದೆ. ಈ ವಿಚಾರದಲ್ಲಿ ಕೃಷಿಕರೊಂದಿಗೆ ಭಾರತೀಯ ಕಿಸಾನ್ ಸಂಘ ಸದಾ ಇದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್‌ಪ್ರಸಾದ್, ತಾಲೂಕು ಅಧ್ಯಕ್ಷ ಜನಾರ್ದನ ರೈ ಪಡ್ಡಂಬೈಲು ತಿಳಿಸಿದರು.

ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್, ಗ್ರಾ.ಪಂ. ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕೃಷಿಕರಾದ ಕೃಷ್ಣಪ್ರಸಾದ್ ಕೊಚ್ಚಿ, ದೇರಣ್ಣ ಶೆಟ್ಟಿ ಕಾವು, ಯೋಗೀಶ್ ಕಾವು, ಯೂಸ್ು ಮುಖಾರಿಮೂಲೆ, ಪಿಡಿಒ ಸುನೀಲ್ ಎಚ್.ಟಿ. ಉಪಸ್ಥಿತರಿದ್ದರು.

ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡಬೇಕಾದರೆ ಕಾನೂನುಗಳಿವೆ. ಸರ್ಕಾರದ ಅನುಮತಿಯೂ ಬೇಕು. ಅದು ಅಷ್ಟೊಂದು ಸುಲಭದಲ್ಲಿ ಆಗುವ ಕೆಲಸವಲ್ಲ. ಕಾಡಾನೆ ಉಪಟಳದಿಂದ ಕೃಷಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೃಷಿಕರು ಪರಿಹಾರಕ್ಕೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಪರಿಹಾರ ಏನಿದ್ದರೂ ಸರ್ಕಾರವೇ ನೀಡಬೇಕು. ಮದನ್, ಪಾಣಾಜೆ ವಲಯ ಅರಣ್ಯಾಧಿಕಾರಿ ಕಾಡಾನೆ ಹಾವಳಿಯಿಂದಾಗಿ ಕೃಷಿ ನಾಶಗೊಂಡ ತೋಟಗಳಿಗೆ ಪಂಚಾಯಿತಿ ವತಿಯಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೃಷಿ ಹಾನಿ ಕುರಿತು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದ್ದೇವೆ. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕಾಡಾನೆಯನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಬರೆದುಕೊಂಡಿದ್ದೇವೆ. ಸಂತೋಷ್ ಮಣಿಯಾಣಿ ಕುತ್ಯಾಡಿ ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net