ಕರ್ಣಾಟಕ ಬ್ಯಾಂಕ್‌ಗೆ ‘ವರ್ಷದ ಸೈಬರ್‌ಭದ್ರತಾ ತಂಡ ’ ಪ್ರಶಸ್ತಿ

mng-7june-k bank
Published on



ಮಂಗಳೂರು : ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ) ಇದರ ವತಿಯಿಂದ ಮುಂಬೈಯಲ್ಲಿ ಜರಗಿದ 4ನೇ ಸಿಐಎಸ್‌ಒ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ಗೆ ‘ವರ್ಷದ ಸೈಬರ್‌ಭದ್ರತಾ ತಂಡ ’ ಮತ್ತು
‘ವರ್ಷದ ಸೈಬರ್‌ಭದ್ರತಾ ಪರಿವರ್ತನೆ’ ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೈಬರ್ ಭದ್ರತೆಯನ್ನು ಹೆಚ್ಚಿಸುವಲ್ಲಿ ಮತ್ತು ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರ ನಂಬಿಕೆಯನ್ನು ಬೆಳೆಸುವಲ್ಲಿ ಕರ್ಣಾಟಕ ಬ್ಯಾಂಕಿನ ಮಹತ್ವದ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.
ಸೈಬರ್ ಭದ್ರತೆಗೆ ಮೀಸಲಾದ ಪ್ರಶಸ್ತಿಗಳನ್ನು ಇದೇ ಪ್ರಥಮ ಬಾರಿಗೆ ಐಬಿಎ ಪರಿಚಯಿಸಿದೆ. ತೀರ್ಪುಗಾರರ ಸಮಿತಿಯಲ್ಲಿ ಭಾರತದ ಡೇಟಾ ಸೆಕ್ಯುರಿಟಿ ಕೌನ್ಸಿಲ್‌ನ ಡಾ. ಶ್ರೀರಾಮ್ ಬಿರುದವೋಲು, ಎನ್‌ಸಿಐಐಪಿಸಿ ಸಲಹೆಗಾರ ಅನಿಲ್ ಭಂಡಾರಿ ಮತ್ತು ಎನ್‌ಪಿಸಿಐಯ ಮುಖ್ಯ ಮಾರುಕಟ್ಟೆ ಮಾಹಿತಿ ಭದ್ರತಾ ಅಧಿಕಾರಿ ಪ್ರವೀಣ್ ಕುಮಾರ್ ಸಹಿತ ತಜ್ಞರು ಇದ್ದರು.
ಮುಂಬೈನಲ್ಲಿ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕಣ್ಣನ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು. ಸೈಬರ್ ಬೆದರಿಕೆಗಳಿಂದ ತನ್ನ ಮಾಹಿತಿ ವ್ಯವಸ್ಥೆಗಳನ್ನು ರಕ್ಷಿಸುವ ಮತ್ತು ಗ್ರಾಹಕರ ನಂಬಿಕೆಯನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಅತ್ಯಾಧುನಿಕ ಸೈಬರ್ ಭದ್ರತಾ ಕ್ರಮಗಳನ್ನು ಮೊದಲೇ ಅಳವಡಿಸಿಕೊಂಡ ಕರ್ನಾಟಕ ಬ್ಯಾಂಕಿನ ಬದ್ಧತೆಗೆ ಈ ಮನ್ನಣೆ ಸಾಕ್ಷಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net