ಸೇವಾನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ

Bel_retired servicemen
Published on

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಸೇವಾನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಮಾತನಾಡಿ ಕಾಕತ್ಕರ್ ಅವರ ಅನುಭವ ಹಾಗೂ ಬದ್ಧತೆ ಭೌತಶಾಸ್ತ್ರ ವಿಭಾಗಕ್ಕೆ ಭದ್ರ ಬುನಾದಿ ಒದಗಿಸಿದೆ. ಆಡಳಿತಾತ್ಮಕವಾಗಿಯೂ ಅವರ ಸೇವೆ ಮಹತ್ತರ ಕೊಡುಗೆ ನೀಡಿದೆ. ಹೊಸ ತಲೆಮಾರಿನವರು ಅವರಿಂದ ಕಲಿಯುವುದು ಬಹಳಷ್ಟಿದೆ. ತುಕಾರಾಮ ಅವರೂ ತಮ್ಮ ಅನುಭವ ಹಾಗೂ ಶಿಸ್ತುಬದ್ಧ ಕಾರ್ಯವೈಖರಿಯಿಂದ ಗ್ರಂಥಾಲಯದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದರು. ಉಪ ಪ್ರಾಂಶುಪಾಲ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಶಿಶೇಖರ ಎನ್.ಕಾಕತ್ಕರ್ ಮತ್ತು ಗ್ರಂಥಾಲಯ ಸಹಾಯಕ ತುಕಾರಾಮ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಅಧ್ಯಕ್ಷತೆ ವಹಿಸಿ, ಕಾಕತ್ಕರ್ ಅವರು ಶಿಸ್ತು, ಸಂಯಮ ಮತ್ತು ಸರಳ ವ್ಯಕ್ತಿತ್ವದಿಂದ ಸದಾ ನೆನಪಿನಲ್ಲಿರುತ್ತಾರೆ. ಕೆಲಸದಲ್ಲಿ ಶ್ರದ್ಧೆ, ಅಚ್ಚುಕಟ್ಟುತನ, ಬೋಧನಾ ವಿಷಯ ಕುರಿತಂತೆ ಜ್ಞಾನದಿಂದ ಅವರು ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ತುಕಾರಾಮ ಅವರೂ ಕೂಡ ಪ್ರಾಮಾಣಿಕ ಸೇವೆ ಸಂಸ್ಥೆಗೆ ನೀಡಿದ್ದಾರೆ ಎಂದರು. ನಿವೃತ್ತರ ಪರವಾಗಿ ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ.ಶಲೀಪ್ ಕುಮಾರಿ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ., ಭೌತಶಾಸ್ತ್ರ ಅಧ್ಯಾಪಕಿ ಅಪೇಕ್ಷಾ, ಅಕೌಂಟ್ಸ್ ಸುಪರಿಂಟೆಂಡೆಂಟ್ ದಿವಾಕರ ಪಟವರ್ಧನ್ ಅನಿಸಿಕೆ ಹಂಚಿಕೊಂಡರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಸವಿತಾ ಕುಮಾರಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ನಾಗಣ್ಣ ಡಿ.ಎ.ನಿರೂಪಿಸಿ, ವಂದಿಸಿದರು.

ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಗ್ರಂಥಾಲಯದ ಬೆಳವಣಿಗೆ ಬಗ್ಗೆ ಖುಷಿ ಇದೆ. ಪ್ರಾಂಶುಪಾಲರಾಗಿದ್ದ ಡಾ.ಬಿ.ಯಶೋವರ್ಮ ಅವರು ನನ್ನ ಮೇಲೆ ವಿಶೇಷ ನಂಬಿಕೆ ಇಟ್ಟಿದ್ದರು. ಸಾರ್ಥಕ ಸೇವೆಯ ತೃಪ್ತಿ ಇದೆ. - ತುಕಾರಾಮ, ಗ್ರಂಥಾಲಯ ಸಹಾಯಕ ವೃತ್ತಿ ಜೀವನದ ವಿಶೇಷ ಸಂದರ್ಭಗಳನ್ನು ಹಂಚಿಕೊಂಡರು. ಅಧ್ಯಾಪನಕ್ಕೆ ಮೂರು ಕಡೆ ಅವಕಾಶ ತೆರೆದಿದ್ದರೂ ತಾನು ಕಲಿತ ಎಸ್‌ಡಿಎಂ ಕಾಲೇಜಿನಲ್ಲಿಯೇ ವೃತ್ತಿ ಜೀವನ ಆರಂಭಿಸಿದ್ದು, ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. - ಶಶಿಶೇಖರ ಎನ್.ಕಾಕತ್ಕರ್, ಉಪ ಪ್ರಾಂಶುಪಾಲ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net