

ಬೆಂಗಳೂರು: ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಮರುನಿಗದಿಯಾಗಿರುವ ವಿಷಯ ಕೇಳಿ, ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿದೆ. ಕರೊನಾ ವೈರಸ್ ಹಾವಳಿಯಿಂದಾಗಿ ಈ ವರ್ಷ ಧೋನಿ ಆಟವನ್ನು ನೋಡಲು ಸಾಧ್ಯವಾಗುವುದೋ, ಇಲ್ಲವೋ ಎಂಬ ಆತಂಕದಲ್ಲಿದ್ದ ಅಭಿಮಾನಿಗಳು ಈಗ ಸಂತಸದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಕೂಡ ಈ ಸಾಲಿನಲ್ಲಿರುವುದು ವಿಶೇಷವಾಗಿದೆ.
'2020ರಲ್ಲಿ ಐಪಿಎಲ್ ನಡೆಯುತ್ತದೆ ಎಂಬ ಸುದ್ದಿಯನ್ನು ಕೇಳಿ ಖುಷಿಯಾಯಿತು. ಎಂಎಸ್ ಧೋನಿ ಅವರ ಆಟವನ್ನು ಮತ್ತೆ ನೋಡಲು ನಾನು ಕಾತರಗೊಂಡಿದ್ದೇನೆ' ಎಂದು ಕಿಡಂಬಿ ಶ್ರೀಕಾಂತ್ ಶುಕ್ರವಾರ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಅವರೊಂದಿಗೆ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಲವಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಂಭ್ರಮ ವ್ಯಕ್ತಪಡಿಸಿದ್ದಾರೆ.
39 ವರ್ಷದ ಧೋನಿ 2019ರ ಏಕದಿನ ವಿಶ್ವಕಪ್ನಲ್ಲಿ ಕೊನೆಯದಾಗಿ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯ ಆಡಿದ್ದರು. ಈ ವರ್ಷದ ಐಪಿಎಲ್ ಮೂಲಕ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ಯೋಜನೆ ಅವರದಾಗಿತ್ತು. ಆದರೆ ಕರೊನಾ ಹಾವಳಿಯಿಂದಾಗಿ ಐಪಿಎಲ್ ನಿಗದಿಯಂತೆ ನಡೆಯದಿದ್ದರೆ, ಟಿ20 ವಿಶ್ವಕಪ್ ಮುಂದೂಡಿಕೆಯಾಗಿದೆ.
ಐಪಿಎಲ್ ದಿನಾಂಕ ಮರುನಿಗದಿಯಾಗಿರುವುದಕ್ಕೆ ಆರ್ಸಿಬಿ ತಂಡ ಕೂಡ ಸಂಭ್ರಮ ವ್ಯಕ್ತಪಡಿಸಿದ್ದು, ಮರಳಿ ಕಣಕ್ಕಿಳಿಯಲು ನಾವು ಕಾತರಗೊಂಡಿದ್ದೇವೆ. ನೀವೂ ನಮ್ಮೊಂದಿಗೆ ಇರುವುದಿರಲ್ಲವೇ? ಎಂದು ಅಭಿಮಾನಿಗಳಿಗೆ ಪ್ರಶ್ನಿಸಿದೆ.