ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹೊಸ ಅಭಿಯಾನ! 100 ದಿನಗಳ ಮುಂಚೆಯೇ ಪೋಸ್ಟರ್!

Published on

ಬೆಂಗಳೂರು: ಅಪ್ಪು ಅಭಿಮಾನಿಗಳನ್ನು ಅಗಲಿ ಹೆಚ್ಚು ಕಡಿಮೆ ಒಂದೂವರೆ ತಿಂಗಳು ಆದರೂ, ಅವರ ಕುಟುಂಬ ಮತ್ತು ಅಭಿಮಾನಿಗಳ ಮನದಲ್ಲಿ ಮಾತ್ರ ನಟ ಎಂದೆಂದಿಗೂ ಚಿರಸ್ಥಾಯಿ. ಪುನೀತ್ ಅವರ ಸಿನಿಮಾಗಳು, ಸಮಾಜ ಸೇವೆ, ವ್ಯಕ್ತಿತ್ವವನ್ನು ಯಾರೂ ಎಂದಿಗೂ ಮರೆಯಲ್ಲ. ನಟನ ನಿಧನದ ನಂತರ ಅವರನ್ನು ನೆನಪಿನಲ್ಲಿ ಇಟ್ಟಿಕೊಳ್ಳಲು ಅಭಿಮಾನಿಗಳು ರಕ್ತದಾನ, ನೇತ್ರದಾನ, ಯಾತ್ರೆಗಳು ಎಂಬಂತೆ ಹಲವಾರು ಕಾರ್ಯಕ್ರಮಗಳನ್ನು ಈಗಲೂ ಹಮ್ಮಿಕೊಳ್ಳುತ್ತಿದ್ದಾರೆ. ಆದರೆ, ಅಪ್ಪು ಹುಟ್ಟುಹಬ್ಬಕ್ಕೆ ಈಗ ಪ್ರೀತಿಯ ಅಭಿಮಾನಿಗಳಿಂದ ಒಂದೊಳ್ಳೆ ಅಭಿಯಾನ ಆರಂಭವಾಗಿದೆ.

ಹೌದು, ಸ್ಟಾರ್ ನಟರ ಹುಟ್ಟು ಹಬ್ಬ ಅಂದರೆ ಸಾಮಾನ್ಯವಾಗಿ ಒಂದು ವಾರದ ಮುಂಚೆ ಅಭಿಮಾನಿಗಳು ಕೇಕ್, ಹೂವಿನ ಹಾರ, ಬ್ಯಾನರ್​ಗಳನ್ನು ಆರ್ಡರ್ ಮಾಡಿ ರೆಡಿ ಮಾಡಿಕೊಂಡಿರುತ್ತಾರೆ. ಜೊತೆಗೆ, ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ ಅಪ್ಪು ಈಗ ನಮ್ಮ ಜೊತೆಯಿಲ್ಲ. ಹೀಗಿದ್ದರೂ, ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ನೆನಪಿನಿನಲ್ಲಿ ಇಟ್ಟುಕೊಳ್ಳುಲು ಪುನೀತ್ ಹುಟ್ಟುಹಬ್ಬಕಿಂತ 100 ದಿನಗಳ ಮುಂಚೆಯೇ ಹುಟ್ಟುಹಬ್ಬದ ಬಗ್ಗೆ ನೆನಪಿನ ಬ್ಯಾನರ್​​ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಹೀಗೆ, ಅಪ್ಪು ಹುಟ್ಟುಹಬ್ಬಕ್ಕೆ ನೂರು ದಿನ ಎಂದು ಒಬ್ಬ ಅಭಿಮಾನಿ ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ, ಮುಂಬೈ ಮೂಲದ ಪವರ್ ಸ್ಟಾರ್ ಅಭಿಮಾನಿ ಬಳಗ 'ಅಪ್ಪು ಹುಟ್ಟುಹಬ್ಬಕ್ಕೆ 100 ದಿನಗಳು ಬಾಕಿ' ಅಂತ ಒಂದು ಬ್ಯಾನರ್ ಹಂಚಿಕೊಂಡು, ಅಭಿಮಾನಿಗಳಿಗೆ ಪುನೀತ್ ಹುಟ್ಟಿದ್ದು 17 ಮಾರ್ಚ್ 1975 ಎಂದು ನೆನಪಿಸಿದ್ದಾರೆ. ಇದೇ, ರೀತಿ ದಿನಕ್ಕೆ ಒಂದು ಪೋಸ್ಟರ್ ಬಿಡುಗಡೆಯಾಗಬಹುದು ಎಂದು ಆಶಿಸುತ್ತಿದ್ದಾರೆ ಉಳಿದ ಅಭಿಮಾನಿಗಳು. ಈಗಾಗಲೇ, ಡಿ. 6 ರಂದು ಪುನೀತ್ ಕನಸಿನ 'ಗಂಧದ ಗುಡಿ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಅದನ್ನು ನೋಡಿ ಅಭಿಮಾನಿಗಳು ಭಾವುಕರಾದರು. ಈಗ ಅಪ್ಪು ಹುಟ್ಟುಹಬ್ಬವನ್ನು ನೆನಪಿಸಿಕೊಂಡು ಕೆಲವರು ಕಣ್ಣೀರಿಡುತ್ತಿದ್ದರೆ, ಉಳಿದವರು ಪುನೀತ್ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎಂದು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net