

ಅಹಮದಾಬಾದ್: ಕ್ರಿಕೆಟ್ ಅನ್ನೋದು ಭಾರತದಲ್ಲಿರುವ ಧರ್ಮಗಳಲ್ಲೊಂದು ಎನ್ನುತ್ತಾರೆ. ಕ್ರಿಕೆಟ್ ಬಗ್ಗೆ ಬಹುತೇಕ ಜನರಿಗಿರುವ ಪ್ರೀತಿ ಅಂಥದ್ದು. ತಮ್ಮ ಮೆಚ್ಚುಗೆಯ ಆಟಗಾರರನ್ನು ನೋಡಿದಾಗ ಮಿತಿ ಮೀರಿ ವರ್ತಿಸುವ ಅಭಿಮಾನಿಗಳಿಗೇನೂ ಕಡಿಮೆ ಇಲ್ಲ. ಇಂಥದ್ದೇ ಒಂದು ಅತಿರೇಕದ ಪ್ರಸಂಗದಲ್ಲಿ ಅಭಿಮಾನಿಯೊಬ್ಬ ಸೆಕ್ಯುರಿಟಿ ಕಣ್ತಪ್ಪಿಸಿ ನೇರ ಪಿಚ್ಗೇ ಆಗಮಿಸಿದ ಘಟನೆ ನಡೆದಿದೆ.
ಬುಧವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ 3ನೇ ಕ್ರಿಕೆಟ್ ಪಂದ್ಯ ಆರಂಭವಾದ ವೇಳೆ. ಭಾರತ ತಂಡದ ನಾಯಕ ವಿರಾಟ್ ಕೋಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅದು ಹೇಗೋ ಸೆಕ್ಯುರಿಟಿ ಪ್ರೊಟೊಕಾಲ್ ಮುರಿದು ಪಿಚ್ವರೆಗೆ ಕೊಹ್ಲಿಯನ್ನು ಭೇಟಿಯಾಗಲು ಅಭಿಮಾನಿಯೊಬ್ಬ ಧಾವಿಸಿ ಬಂದ. ಈ ದಿಢೀರ್ ಆಗಮನವನ್ನು ಕೊಂಚ ದೂರದಿಂದಲೇ ಗ್ರಹಿಸಿದ ಕೊಹ್ಲಿ, ಹಿಂದಕ್ಕೆ ಸರಿದು ಅಭಿಮಾನಿಗೆ ವಾಪಸಾಗಲು ಹೇಳಿದ ವೀಡಿಯೋ ತುಣುಕು ಇದೀಗ ವೈರಲ್ ಆಗಿದೆ.
ಕರೊನಾ ಮುನ್ನೆಚ್ಚರಿಕೆ ದೃಷ್ಟಿಯಿಂದ ಬಯೊಬಬಲ್ ಪ್ರೊಟೊಕಾಲ್ ಪಾಲಿಸಲಾಗುತ್ತಿದ್ದು, ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಹೊರಗಿನವರನ್ನು ಭೇಟಿ ಮಾಡುವ ಹಾಗಿಲ್ಲ. ತರಬೇತಿ ಸಮಯದಲ್ಲೂ ಅತಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಲಿ ಪಂದ್ಯಾವಳಿಯನ್ನು ನೋಡಲು ಶೇ.50 ರಷ್ಟು ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ.
ಹೀಗಿರುವಾಗ, ತಮ್ಮ ಎದುರಿಗೇ ಪ್ರತ್ಯಕ್ವನಾದ ಅಭಿಮಾನಿಯನ್ನು ನೋಡಿದ ವಿರಾಟ್ ಕೊಹ್ಲಿ ಅವರು ಬೆಚ್ಚಿಬಿದ್ದಂತೆ ಪ್ರತಿಕ್ರಿಯೆ ನೀಡಿದ್ದಾರೆ. ತಕ್ಷಣ ಹಿಂದಕ್ಕೆ ಒಂದೆರಡು ಹೆಜ್ಜೆ ಹಾಕಿ ಅಭಿಮಾನಿಯನ್ನು ಮರಳಲು ಹೇಳಿದ್ದಾರೆ. ಸದರಿ ಅಭಿಮಾನಿಯು ನಂತರ ವಾಪಸಾಗಿದ್ದಾನೆ. ಈ ರೀತಿಯಾಗಿ ಸುರಕ್ಷಾ ವ್ಯವಸ್ಥೆಯನ್ನು ದಾಟಿ ಬಂದ ಬಗ್ಗೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ತನಿಖೆ ಆರಂಭಿಸಿದೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ