

ಬೆಂಗಳೂರು: ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಹರಿಶ್ಚಂದ್ರ ಘಾಟ್ನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಇಂದು ರಾತ್ರಿ 11 ಗಂಟೆ ಸುಮಾರಿಗೆ ಸ್ಪಂದನಾ ಅವರ ಪಾರ್ಥೀವ ಶರೀರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿರುವ ಸಾಧ್ಯತೆ ಇದೆ. 12 ಗಂಟೆ ವೇಳೆಗೆ ಮಲ್ಲೇಶ್ವರಂನಲ್ಲಿರುವ ಮನೆಗೆ ತಲುಪಲಿದೆ. ಬಳಿಕ ಮನೆಯ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನ ನಡೆಯಲಿದೆ.
ಇಂದು ಬೆಳಗ್ಗೆಯಿಂದಲೂ ಬ್ಯಾಂಕಾಕ್ನಲ್ಲಿ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ. ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಬಾಕಿ ಉಳಿದಿರುವ ಪ್ರಕ್ರಿಯೆಗಳು ಇಂದು ಮಧ್ಯಾಹ್ನದ ಒಳಗೆ ಮುಗಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ಸ್ಪಂದನಾ ಅವರ ಪೊಸ್ಟ್ ಮಾರ್ಟಂ ಮುಗಿದಿದೆ. ಥೈಲಾಂಟ್ನಲ್ಲಿ ಒಂದು ಘಂಟೆಗೆ ಪ್ರೊಸಿಜರ್ ಮುಗಿಯಲಿದೆ. ಸಂಜೆ ಥೈ ಏರ್ಲೈನ್ಸ್ನಲ್ಲಿ ಮೃತದೇಹ ತರಲಾಗ್ತಿದೆ. ರಾತ್ರಿ 11 ರ ವೇಳೆಗೆ ಮೃತದೇಹ ಬೆಂಗಳೂರು ಏರ್ಪರ್ಟ್ಗೆ ಬರಲಿದೆ. ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೂ ಮಲ್ಲೇಶ್ವರಂ ರಲ್ಲಿ ಅಂತಿಮನಮನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮಧ್ಯಾಹ್ನ ಶ್ರೀರಾಂಪುರ ಹರಿಶ್ಚಂದ್ರ ಘಾಟ್ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು.
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಂದಿನಂತೆ ಮೊನ್ನೆ ರಾತ್ರಿ ಮಲಗಿದ ಸ್ಪಂದನಾ ಹಾಸಿಗೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್)