ಪತ್ನಿಯ ಕಾಮದಾಸೆಗೆ ಹೋಯಿತು ಒಂದೇ ಕುಟುಂಬದ ನಾಲ್ವರ ಪ್ರಾಣ! ವರದಕ್ಷಿಣೆ, ನಕಲಿ ಕೇಸ್​ಗಳ ಬೆದರಿಕೆ... | Mass Suicide

ವಿಜಯವಾಣಿ - 2025-08-04T154250.724
Published on

Mass Suicide: ಮಧ್ಯಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡ ಘಟನೆ ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ನಾಲ್ಕು ಮಂದಿ ಸಾವಿಗೀಡಾದ ಕೆಲವು ದಿನಗಳ ಬಳಿಕ ಅವರ ಸಾವಿನ ಹಿಂದಿದ್ದ ಅಸಲಿ ಕಾರಣ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಇಷ್ಟಕ್ಕೆಲ್ಲ ಕಾರಣ ಮೃತನ ಹೆಂಡತಿ.

ಮೃತರ ಕುಟುಂಬಸ್ಥರ ಆರೋಪ ಮತ್ತು ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಇಡೀ ದುರಂತಕ್ಕೆ ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನೇ ಕಾರಣ ಎಂಬುದು ದೃಢವಾಗಿದೆ. ಇದರ ಬೆನ್ನಲ್ಲೇ ಖಾಕಿ ಪಡೆ ಇಬ್ಬರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ. ವರದಿಗಳ ಪ್ರಕಾರ, ಇದೇ ಜು.25-26ರ ಮಧ್ಯರಾತ್ರಿ ಆರೋಪಿ ಮಹಿಳೆಯ ಪತಿ, ಆತನ ತಾಯಿ (70) ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು (ಪುತ್ರ ಮತ್ತು ಪುತ್ರಿ) ವಿಷ ಸೇವಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಮೃತ ಮನೋಹರ್ ಲೋಧಿ ಪತ್ನಿ ದ್ರೌಪದಿ ಎಂಬಾಕೆ, ತನ್ನ ಬಾಲ್ಯದ ಸ್ನೇಹಿತ ಸುರೇಂದ್ರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ಸರಸ-ಸಲ್ಲಾಪ ಮನೋಹರ್​ ಮತ್ತು ಆತನ ಕುಟುಂಬಕ್ಕೆ ತಿಳಿದಿತ್ತು. ಸಂಶಯಗಳು ದೃಢವಾದ ಬಳಿಕವೇ ಹೆಂಡತಿಗೆ ಇದೆಲ್ಲ ಇಲ್ಲಿಗೆ ನಿಲ್ಲಬೇಕು ಎಂದು ಪತಿ ಎಚ್ಚರಿಸಿದ್ದ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದ್ರೌಪದಿ, ಪ್ರಿಯಕರನೊಂದಿಗೆ ಚೆಲ್ಲಾಟ ಮುಂದುವರಿಸಿದ್ದಳು.

ತಾಯಿಯ ಅನೈತಿಕ ಸಂಬಂಧದ ಬಗ್ಗೆ ಮಗಳು ಶಿವಾನಿ ಕೂಡ ಮೌನ ಮುರಿದಿದ್ದಳು. ಪ್ರಿಯಕರನೊಂದಿಗೆ ದ್ರೌಪದಿ ಹಲವು ಬಾರಿ ಒಟ್ಟಿಗಿರುವುದನ್ನು ಪುತ್ರಿ ಕಣ್ಣಾರೆ ನೋಡಿದ್ದಾಗಿ ಆರೋಪಿಸಿದ್ದಳು. ನಮ್ಮ ಕುಟುಂಬದ ಮಾನ-ಮರ್ಯಾದೆ ಬೀದಿ ಪಾಲಾಗುತ್ತದೆ. ದಯವಿಟ್ಟು, ಅವನನ್ನು ಬಿಟ್ಟು ನನ್ನೊಂದಿಗೆ ಸಂಸಾರ ಮಾಡು ಎಂದು ಕಳಕಳಿ ಮನವಿ ಮಾಡಿಕೊಂಡರೂ ಸಹ ದ್ರೌಪದಿ ಕ್ಯಾರೇ ಎನ್ನಲಿಲ್ಲ. ಪತಿಯ ಮನೆಯವರಿಂದ ವಿಪರೀತ ಆಕ್ಷೇಪಗಳ ಬೆನ್ನಲ್ಲೇ ಆಕೆ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ವರದಕ್ಷಿಣೆ ಕಿರುಕುಳ ಸೇರಿ ಹಲವು ನಕಲಿ ಕೇಸ್​ ದಾಖಲಿಸುವುದಾಗಿ ಮನೋಹರ್​ ಕುಟುಂಬಕ್ಕೆ ದ್ರೌಪದಿ ಬೆದರಿಕೆ ಹಾಕಿದ್ದಳು. ಹೆಂಡತಿಯಿಂದ ತೀರ ಒತ್ತಡ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತಿದ್ದ ದ್ರೌಪದಿಯ ಪತಿ, ತನ್ನ ತಾಯಿ ಮತ್ತು ಇಬ್ಬರು ಮಕ್ಕಳಿಗೆ ಸಲ್ಫಾ ಮಾತ್ರೆಗಳನ್ನು ಕುಡಿಸಿ, ಆತ್ಮಹತ್ಯೆಗೆ ಶರಣಾದರು. ಮನೋಹರ್​ ತಾಯಿ ಮತ್ತು ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದರೆ, ಆತ ಮತ್ತು ಮಗಳು ಆಸ್ಪತ್ರೆ ಸೇರುವ ಮುನ್ನವೇ ಪ್ರಾಣಬಿಟ್ಟಿದ್ದಾರೆ.

"ಪ್ರಸ್ತುತ, ಒಂದೇ ಕುಟುಂಬದ ನಾಲ್ವರ ಸಾವಿಗೆ ಕಾರಣರಾದ ದ್ರೌಪದಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದೇವೆ. ಈ ದುರಂತಕ್ಕೆ ಇವರಿಬ್ಬರ ಅಕ್ರಮ ಸಂಬಂಧವೇ ಪ್ರಮುಖ ಕಾರಣ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿಂದ ಅವರನ್ನು ನೇರವಾಗಿ ಜೈಲಿಗೆ ಕಳುಹಿಸಲಾಗುವುದು" ಎಂದು ಇನ್ಸ್‌ಪೆಕ್ಟರ್ ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net