ಜಿಲ್ಲೆ ರಚನೆಗೆ ಸರ್ಕಾರದ ಮೇಲೆ ಒತ್ತಡ ಅವಶ್ಯ, ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಅಭಿಮತ

PROTEST
ಕಿಷ್ಕಿಂಧಾ ಜಿಲ್ಲೆ ರಚನೆಗೆ ಒತ್ತಾಯಿಸಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಕೇಂದ್ರದ ವಿದ್ಯಾರ್ಥಿಗಳು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು. ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಇತರರಿದ್ದರು.
Published on

ಗಂಗಾವತಿ: ಗಂಗಾವತಿ ಕೇಂದ್ರವನ್ನಾಗಿಟ್ಟುಕೊಂಡು ಕಿಷ್ಕಿಂಧಾ ಜಿಲ್ಲೆ ರಚಿಸುವಂತೆ ಒತ್ತಾಯಿಸಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಕೇಂದ್ರದ ವಿದ್ಯಾರ್ಥಿಗಳು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಸಂಘದ ಶಾಲಾ, ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಪಂಪಾನಗರದ ಕಾಲೇಜು ಕ್ಯಾಂಪಸ್‌ನಿಂದ ಪ್ರತಿಭಟನಾ ರ‌್ಯಾಲಿಯಲ್ಲಿ ಆಗಮಿಸಿ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಬೇಡಿಕೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ಗಂಗಾವತಿ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದ್ದು, ಆದಾಯ ಸಂಪನ್ಮೂಲಗಳಿವೆ. 1996ರಲ್ಲೇ ಗಂಗಾವತಿ ಜಿಲ್ಲೆಯಾಗಬೇಕಿತ್ತು. ಆದರೆ ಸ್ಥಳೀಯ ನಾಯಕರ ನಿರ್ಲಕ್ಷ್ಯದಿಂದ ಅವಕಾಶ ಕಳೆದುಕೊಳ್ಳುವ ಸ್ಥಿತಿ ಬಂದಿತ್ತು. ಗಂಗಾವತಿ, ಕಾರಟಗಿ, ಕನಕಗಿರಿ, ಸಿಂಧನೂರು ಮತ್ತು ಕಂಪ್ಲಿ ತಾಲೂಕುಗಳನ್ನೊಳಗೊಂಡ ಕಿಷ್ಕಿಂಧಾ ಜಿಲ್ಲೆ ರಚಿಸಬೇಕಿದ್ದು, ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಆರ್‌ಟಿಒ, ಜೆಸ್ಕಾಂ ಸೇರಿ ಇತರ ಇಲಾಖೆಗಳಿಗೆ ಹೆಚ್ಚಿನ ಆದಾಯ ಗಂಗಾವತಿಯಿಂದಲೇ ಇದ್ದು, ಅತಿ ಹೆಚ್ಚು ಶಾಲಾ, ಕಾಲೇಜುಗಳನ್ನು ಹೊಂದಿದೆ. ಹೊಸ ಜಿಲ್ಲೆ ರಚನೆಗೆ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಗಂಗಾವತಿ ಕೇಂದ್ರವಾಗಿಟ್ಟುಕೊಂಡು ಕಿಷ್ಕಿಂಧಾ ಜಿಲ್ಲೆ ರಚನೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಮಾಜಿ ಸಂಸದ ಎಸ್.ಶಿವರಾಮನಗೌಡ, ಸಂಘದ ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ಸಹ ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಕಾಲೇಜು ಆಡಳಿತಾಧಿಕಾರಿ ಬಸಮ್ಮ, ಅಧೀಕ್ಷಕ ಯು.ಎಂ.ಅನಿಲ್, ಜಿಎಚ್‌ಎನ್ ಕಾಲೇಜಿನ ಪ್ರಾಚಾರ್ಯ ಪ್ರೊ. ಬಸವರಾಜ ಅಯೋಧ್ಯಾ, ಉಪನ್ಯಾಸಕರಾದ ಡಾ.ವಾಣಿಶ್ರೀ ಪಾಟೀಲ್, ಡಾ.ಶಾರದಾ ಪಾಟೀಲ್, ಲಕ್ಷ್ಮೀಕಾಂತ ಹೇರೂರು, ಯು.ಎಂ.ಬಸವರಾಜ ಇತರರಿದ್ದರು.

6 ಸಾವಿರ ಪತ್ರದ ಮೂಲಕ ಮನವಿ: ಕಿಷ್ಕಿಂಧಾ ಜಿಲ್ಲೆ ರಚನೆಗಾಗಿ ಸಂಘ ವ್ಯಾಪ್ತಿಯ 18 ಶಿಕ್ಷಣ ಸಂಸ್ಥೆಯನ್ನೊಳಗೊಂಡ ಶಾಲಾ ವಿದ್ಯಾರ್ಥಿಗಳ ಸ್ವಹಸ್ತಾಕ್ಷರದ ಪತ್ರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಗರದ ಮುಖ್ಯ ಅಂಚೆ ಕಚೇರಿ ಮೂಲಕ ರವಾನಿಸಲಾಯಿತು. 6ಸಾವಿರ ಪತ್ರಗಳನ್ನು ವಿದ್ಯಾರ್ಥಿಗಳು ಏಕಕಾಲಕ್ಕೆ ಪೋಸ್ಟ್ ಮಾಡಿದ್ದು, ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ಕೇಂದ್ರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದು ವಿಶೇಷ. ಪತ್ರ ಚಳವಳಿ ಮತ್ತು ಪ್ರತಿಭಟನೆಗೆ ಹೋರಾಟ ಸಮಿತಿಯ ಒಬ್ಬ ಪ್ರತಿನಿಧಿಯೂ ಭಾಗವಹಿಸದೇ ನಿರ್ಲಕ್ಷೃ ವಹಿಸಿದ್ದು, ಹೋರಾಟ ಮನೋಭಾವ ಬಹಿರಂಗವಾಯಿತು.

ಕೊಪ್ಪಳ ಜಿಲ್ಲೆ ರಚನೆಗೆ ಮೊದಲು ಗಂಗಾವತಿಯೇ ಜಿಲ್ಲಾ ಕೇಂದ್ರವಾಗಬೇಕಿತ್ತು. ಅಂದಿನ ಜನಪ್ರತಿನಿಧಿಗಳು ಮತ್ತು ಮುಖಂಡರು ನಿರ್ಲಕ್ಷ್ಯಮನೋಭಾವನೆ ಮತ್ತು ಇಚ್ಛಾಶಕ್ತಿ ಕೊರತೆಯಿಂದ ಗಂಗಾವತಿ ಜಿಲ್ಲೆಯಾಗಲು ಕೈತಪ್ಪಿತ್ತು.

ಎಸ್.ಶಿವರಾಮನಗೌಡ, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net