

ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ನೂತನ ಪ್ರಯಾಣ ನಿಯಮಾವಳಿ ಯನ್ನು ಜಾರಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಇದರನ್ವಯ ಭಾರತ ತಂಡದ ಆಟಗಾರರು ಫೆಬ್ರವರಿ 15ರಂದು ದುಬೈಗೆ ಪ್ರಯಾಣಿಸುವ ವೇಳೆ ಪತ್ನಿ, ಮಕ್ಕಳ ಸಹಿತ ಕುಟುಂಬ ಸದಸ್ಯರನ್ನು ಕರೆದೊಯ್ಯಲು ನಿರ್ಬಂಧ ಹೇರಲಾಗಿದೆ.
ಫೆ. 19ರಿಂದ ನಡೆಯಲಿರುವ ಐಸಿಸಿ ಟೂರ್ನಿಯಲ್ಲಿ ಭಾರತ ತಂಡ ಫೆ.20ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಫೆ. 23ಕ್ಕೆ ಪಾಕಿಸ್ತಾನ ಮತ್ತು ಮಾ.2ಕ್ಕೆ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಟೂರ್ನಿಯ ಫೈನಲ್ ಮಾರ್ಚ್ 9ಕ್ಕೆ ನಿಗದಿಯಾಗಿದೆ. ಟೂರ್ನಿಯ ಒಟ್ಟಾರೆ ಅವಧಿ ಸುಮಾರು ಮೂರು ವಾರ ಆಗಿದೆ. ಹೀಗಾಗಿ ಕುಟುಂಬ ಸದಸ್ಯರಿಗೆ ಆಟಗಾರರ ಜತೆಗೆ ವಸತಿ ವ್ಯವಸ್ಥೆ ಮಾಡಲು ಬಿಸಿಸಿಐ ನಿರಾಕರಿಸಿದೆ. ಬಿಸಿಸಿಐನ ಹೊಸ ನಿಯಮಾವಳಿ ಅನ್ವಯ 45 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಪ್ರವಾಸದ ವೇಳೆ ಆಟಗಾರರು ಗರಿಷ್ಠ 2 ವಾರಗಳನ್ನು ಕುಟುಂಬದೊಂದಿಗೆ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ.
ದುಬೈಗೆ ಕುಟುಂಬದ ಸದಸ್ಯರನ್ನು ಕರೆದೊಯ್ಯುವ ಬಗ್ಗೆ ಹಿರಿಯ ಆಟಗಾರರ ಕೇಳಿದಾಗ ಹೊಸ ನಿಯಮಾವಳಿಯನ್ನು ಅವರಿಗೆ ತಿಳಿಸಲಾಗಿದೆ. ಈ ಪ್ರವಾಸ ಒಂದು ತಿಂಗಳಿಗೂ ಕಡಿಮೆ ಅವಧಿಯದ್ದಾಗಿದೆ. ಹೀಗಾಗಿ ನಿರ್ಬಂಧಿಸಲಾಗಿದೆ. ಒಂದು ವೇಳೆ ವಿನಾಯಿತಿ ನೀಡಿದರೂ, ಕುಟುಂಬದ ಸದಸ್ಯರ ಪ್ರಯಾಣ, ವಸತಿಯ ವೆಚ್ಚವನ್ನು ಆಟಗಾರರೇ ಭರಿಸಬೇಕಾಗಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಜೂನ್-ಜುಲೈ-ಆಗಸ್ಟ್ನಲ್ಲಿ ಭಾರತ ತಂಡ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸ 45 ದಿನಗಳಿಗೂ ಅಧಿಕ ಇರುವುದರಿಂದ ಆಗ ಆಟಗಾರರಿಗೆ 2 ವಾರಗಳ ಕಾಲ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ದೊರೆಯಲಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೈಫಲ್ಯದ ಬಳಿಕ ಈ ಹೊಸ ನಿಯಮಾವಳಿಯನ್ನು ರೂಪಿಸಲಾಗಿದೆ. ಈ ನಡುವೆ ಕೆಲ ಆಟಗಾರರ ವಿಶೇಷ ಡಯಟ್ ಅಗತ್ಯಗಳಿಗೆ ತಕ್ಕಂತೆ ತಾನೇ ಕೆಲ ಬಾಣಸಿಗರನ್ನು ನೇಮಿಸಿಕೊಳ್ಳಲು ಬಿಸಿಸಿಐ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಈಗಾಗಲೇ ಕೆಲವು ಅಳವಡಿಕೆ: ಬಿಸಿಸಿಐ ರೂಪಿಸಿರುವ ಕಟ್ಟುನಿಟ್ಟಿನ ಹೊಸ ನಿಯಮಾವಳಿಗಳ ಪೈಕಿ ಕೆಲವು ಈಗಾಗಲೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದಲೇ ಜಾರಿಯಾಗಿವೆ. ತಂಡದ ಎಲ್ಲ ಆಟಗಾರರು ಒಟ್ಟಾಗಿ ಬಸ್ನಲ್ಲೇ ಪ್ರಯಾಣಿಸುವುದು, ಅಭ್ಯಾಸದ ವೇಳೆ ಖಾಸಗಿ ವಾಹನದಲ್ಲಿ ಪ್ರಯಾಣಿಸದಿರುವುದು ಇದರಲ್ಲಿ ಪ್ರಮುಖವಾದವು. ಕಡ್ಡಾಯವಾಗಿ ದೇಶೀಯ ಕ್ರಿಕೆಟ್ನಲ್ಲಿ ಆಡುವ ನಿಯಮವನ್ನೂ ಸ್ಟಾರ್ ಆಟಗಾರರು ಈಗಾಗಲೆ ಪಾಲಿಸಿದ್ದಾರೆ.