ಪಿಯು ವಿದ್ಯಾರ್ಥಿಗಳಿಗೆ ಇಂಗ್ಲಿಷ್​ನಲ್ಲಿ 26 ಗ್ರೇಸ್ ಅಂಕ! ಈ ಸುದ್ದಿ ಹರಿಬಿಟ್ಟವರ ವಿರುದ್ಧ ಕೇಸ್

suresh kumar
Published on

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿದ್ದ ಕಿಡಿಗೇಡಿಗಳು ತಪ್ಪು ಸಂದೇಶ ಹರಿಬಿಟ್ಟಿದ್ದರು.

ನಿನ್ನೆ ಸಚಿವರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರ ಹೆಸರಿನ ನಕಲಿ ಟ್ವಿಟರ್ ಖಾತೆಯಲ್ಲಿ “ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ 26 ಗ್ರೇಸ್ ಅಂಕ ನೀಡುವ ಕುರಿತು ಮೌಲ್ಯಮಾಪಕರಿಗೆ ಸೂಚಿಸಲಾಗಿದೆ’' ಎಂಬ ಸುಳ್ಳು ಸಂದೇಶ ಹಾಕಲಾಗಿದೆ ಎಂದು ಪಿಯು ಶಿಕ್ಷಣ ಇಲಾಖೆ ನಿರ್ದೇಶಕರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದೂರಿನ ಜತೆ ನಕಲಿ ಟ್ವಿಟರ್ ಖಾತೆಯಲ್ಲಿ ಹರಿಯಬಿಟ್ಟ ಸಂದೇಶದ ಪ್ರತಿಯನ್ನು ಲಗತ್ತಿಸಿದ್ದು, ಈ ನಕಲಿ ಸಂದೇಶವು ರಾಜ್ಯದ ಪಿಯು ವಿದ್ಯಾರ್ಥಿಗಳು, ಪೋಷಕರು, ಇಲಾಖೆಯ ಅಧಿಕಾರಿಗಳಲ್ಲಿ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ ಈ ಸಂದೇಶವು ಇಲಾಖೆಗೆ ಮುಜುಗರದ ಸನ್ನಿವೇಶ ಸೃಷ್ಟಿಸಿತ್ತು ಎಂದು ವಿವರಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇಲಾಖೆಗೆ ಮುಜುಗರ ತರುವಂತಹ ಸಂದೇಶ ಹರಿಯಬಿಟ್ಟ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಮಾರ್ಚ್​ ತಿಂಗಳಿನಲ್ಲೇ ನಡೆಯಬೇಕಿದ್ದ ಪಿಯುಸಿ ಇಂಗ್ಲಿಷ್​ ಪರೀಕ್ಷೆಯನ್ನು ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈ ಪರೀಕ್ಷೆ ಜೂ.18ರಂದು ನಡೆದಿತ್ತು. ನಿನ್ನೆಯಷ್ಟೆ (ಜು.14) ಫಲಿತಾಂಶ ಪ್ರಕಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net