ED ಅಧಿಕಾರಿಗಳ ಸೋಗಿನಲ್ಲಿ ರೇಡ್​​​​; ವಿಷಯ ತಿಳಿದ ಪೊಲೀಸರು ಮಾಡಿದ್ದೇನು ಗೊತ್ತಾ?

Special 26
Published on

ಕಚ್​: ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬುದಕ್ಕೆ ಪ್ರತಿನಿತ್ಯ ನಮ್ಮ ಸುತ್ತಮುತ್ತಲೂ ನಡೆಯುವ ಘಟನೆಗಳೇ ಜೀವಂತ ಸಾಕ್ಷಿಯಾಗಿದೆ. ಸಿನಿಮಾದಿಂದ ಪ್ರಭಾವಿತರಾಗಿ ನಿಜಜೀವನದಲ್ಲಿ ಅದನ್ನು ಮಾಡಲು ಹೊರಟ ವ್ಯಕ್ತಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಗುಜರಾತ್​ನ ಕಚ್​ನಲ್ಲಿ ನಡೆದಿದ್ದು, ಈ ಸುದ್ದಿ ಸಖತ್​ ವೈರಲ್​ ಆಗುತ್ತಿದೆ.

2013ರಲ್ಲಿ ಬಿಡುಗಡೆಯಾಗಿದ್ದ ಅಕ್ಷಯ್​ ಕುಮಾರ್​ ನಟನೆಯ ಸ್ಪೆಷಲ್​ 26 ಸಿನಿಮಾದಿಂದ ಪ್ರಭಾವಿತರಾಗಿ 12 ಸದಸ್ಯರಿರುವ ಕಳ್ಳರ ಗುಂಪೊಂದು ಉದ್ಯಮಿ ಹಾಗೂ ವ್ಯಾಪಾರಿಗಳ ಮನೆ ಮೇಲೆ ಇಡಿ (ED) ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿ ಕಳ್ಳತನ ಮಾಡುತ್ತಿದ್ದರು. ಇದೀಗ ಪೊಲೀಸರು ಈ ಖತರ್ನಾಕ್​ ಗ್ಯಾಂಗ್​​ಅನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಾಗರ್​ ಬಾಗ್ಮಾರ್, ಕಚ್​ನ ಗಾಂಧಿಧಾಮದಲ್ಲಿರುವ ಚಿನ್ನದ ವ್ಯಾಪಾರಿ ಮನೆಗೆ ಆರೋಪಿಗಳು ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿದ್ದು, ತಮ್ಮ ಆಸ್ತಿ ಹಾಗೂ ಬ್ಯಾಂಕ್​ ವಹಿವಾಟಿನ ಲೆಕ್ಕವನ್ನು ಕೊಡುವಂತೆ ಸೂಚಿಸಿದ್ದಾರೆ. ಇದಲ್ಲದೆ ತನಿಖೆಗೆ ಸಹಕರಿಸದಿದ್ದರೆ ಬಂಧಿಸುವುದಾಗಿಯೂ ಹೆದರಿಸಿ ಮನೆ ಹಾಗೂ ಅಂಗಡಿಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮನೆಯಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಬಂಧಿಸಲು ನಮಗೆ ಸಹಕಾರಿಯಾಯಿತು.

ಕೂಡಲೇ ಎಚ್ಚೆತ್ತ ವ್ಯಾಪಾರಿ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 45 ಲಕ್ಷದ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಾಗರ್​ ಬಾಗ್ಮಾರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net