

ರಾಮನಗರ: ತನ್ನ ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಚನ್ನಪಟ್ಟಣದ ಕೋಟೆ ಬಡಾವಣೆಯಲ್ಲಿ ನಡೆದಿದೆ.
ಯುವಕ ವೆಂಕಟೇಶ್ಗೆ (29) ಯುವತಿ ಮೇಘನಾ (28) ಮೇಲೆ ಪ್ರೀತಿಯಾಗಿತ್ತು. ಆದರೆ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಮೇಘನಾಳ ಹೊಟ್ಟೆ ಹಾಗೂ ಎದೆ ಭಾಗಕ್ಕೆ ನಾಲ್ಕೈದು ಬಾರಿ ಚಾಕು ಇರಿದು ಹತ್ಯೆ ನಡೆಸಲು ಯತ್ನಿಸಿದ್ದಾನೆ. ನಂತರ ತಾನೂ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಇರಿದುಕೊಂಡು ಆತ್ಮಹತ್ಯೆ ಮಾಡಲು ಮುಂದಾಗಿದ್ದಾನೆ. ಸದ್ಯ ಇವರಿಬ್ಬರ ಸ್ಥಿತಿ ಗಂಭಿರವಾಗಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನಲೆ:
ಚನ್ನಪಟ್ಟಣ ನಿವಾಸಿ ಮೇಘನಾ ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ರಾಮನಗರ ನಿವಾಸಿ ವೆಂಕಟೇಶ್ ಈ ಹಿಂದೆ ಚನ್ನಪಟ್ಟಣದ ಮೊಬೈಲ್ ಶಾಪ್ ಒಂದರಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಮೇಘನಾಳ ಪರಿಚಯವಾಗಿತ್ತು. ನಂತರ ವೆಂಕಟೇಶ್ಗೆ ಪ್ರೇಮಾಂಕುರವಾಗಿತ್ತು. ತನ್ನ ಪ್ರೀತಿಯನ್ನು ಮೇಘನಾ ಬಳಿಯೂ ಪ್ರಸ್ತಾಪಿಸಿದ್ದ.
ಆದರೆ ಮೇಘನಾ ಮಾತ್ರ ಪ್ರೀತಿಯನ್ನು ನಿರಾಕರಿಸಿದ್ದಳು. ಬಳಿಕ ಪದೇ ಪದೇ ತನ್ನ ಪ್ರೀತಿಯ ಬಗ್ಗೆ ಪೀಡಿಸುತ್ತಿದ್ದ ವೆಂಕಟೇಶ್ನ ಕಾಟಕ್ಕೆ ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಆಕೆಯ ಬಗ್ಗೆ ಹುಚ್ಚು ಪ್ರೀತಿಯನ್ನು ಹೊಂದಿದ್ದ ವೆಂಕಟೇಶ್ ಮೇಘನಾ ಮನೆ ಬಳಿ ಹೋಗಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಮೇಘನಾ ಪ್ರೀತಿ ನಿರಾಕರಿಸಿದ್ದಕ್ಕಾಗಿ ಏಕಾಏಕಿ ಚೂರಿ ಇರಿದಿದ್ದಾನೆ.(ದಿಗ್ವಿಜಯ ನ್ಯೂಸ್)