VIDEO| ಆಗಸದಲ್ಲೇ ಇಂಧನ ತುಂಬುವ ವಿಡಿಯೋ ರಫೇಲ್​ಗೆ ಸಂಬಂಧಿಸಿದ್ದಲ್ಲ, ಸತ್ಯಾಂಶವೇ ಬೇರೆ!

Rafeal
Published on

ನವದೆಹಲಿ: ಫ್ರಾನ್ಸ್​ ಜತೆಗಿನ ರಕ್ಷಣ ಒಪ್ಪಂದದ ಭಾಗವಾಗಿ ಐದು ರಫೇಲ್​ ಜೆಟ್ ಯುದ್ಧ ವಿಮಾನಗಳು ಮೊದಲ ಹಂತದಲ್ಲಿ ಭಾರತಕ್ಕೆ ಬಂದಿವೆ. ಜುಲೈ 29ರಂದು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ರಫೇಲ್​ ವಿಮಾನಗಳು ಭೂಸ್ಪರ್ಶಿಸಿದವು.

ಜುಲೈ 27ರಂದು ಫ್ರಾನ್ಸ್​ನ ಬೋರ್ಡೆಕ್ಸ್​ ಬಳಿಯಿರುವ ಮೆರಿಗ್ನ್ಯಾಕ್​ ವಾಯುನೆಲೆಯಿಂದ ಟೇಕಾಫ್​ ಆದ ರಫೇಲ್​ ಜೆಟ್​ಗಳು ಪ್ರಯಾಣದ ನಡುವೆ ಯುಎಇನಲ್ಲಿ ಒಮ್ಮೆ ಮಾತ್ರ ತಂಗಿದ್ದವು. ಸುಮಾರು 7000 ಕಿ.ಮೀ ಕ್ರಮಿಸಿದ ರಫೇಲ್​ ಜೆಟ್​ಗಳು ಜುಲೈ 29ಕ್ಕೆ ಭಾರತಕ್ಕೆ ಬಂದಿಳಿದವು.

​ಇದರ ನಡುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಫ್ರಾನ್ಸ್​ನಿಂದ ಭಾರತಕ್ಕೆ ಬಂದಿರುವ ಜೆಟ್​ ವಿಮಾನಗಳಲ್ಲಿ ಒಂದಕ್ಕೆ ಪ್ರಯಾಣದ ವೇಳೆ 30 ಸಾವಿರ ಅಡಿ ಎತ್ತರದಲ್ಲಿ ಮಾರ್ಗ ಮಧ್ಯೆ ಇಂಧನ ತುಂಬುತ್ತಿರುವ ವಿಡಿಯೋ ಇದು ಎಂದು ಅಡಿಬರಹ ಬರೆದು ವಿಡಿಯೋ ಹರಿಬಿಡಲಾಗಿದೆ. ಅನೇಕ ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಆದರೆ, ಇದು ಎಷ್ಟು ನಿಜಾಂಶವೆಂದು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ. ಸದ್ಯ ಹರಿದಾಡುತ್ತಿರುವ ವಿಡಿಯೋ ಎರಡು ವರ್ಷ ಹಳೆಯದು. ವಿಡಿಯೋವು ಬ್ರೆಜಿಲಿಯನ್​ ಏರ್​ ಪೋರ್ಸ್​ಗೆ ಸಂಬಂಧಿಸಿದ್ದು. ಅಲ್ಲಿನ ವಾಯುನೆಲೆಯ ಎಫ್​-5 ಯುದ್ಧ ವಿಮಾನವು ನೌಕಾಪಡೆಯ ಎ-4 ಯುದ್ಧ ವಿಮಾನಕ್ಕೆ ಮಾರ್ಗ ಮಧ್ಯೆ ಇಂಧನ ತುಂಬುತ್ತಿರುವ ವಿಡಿಯೋ ಇದಾಗಿದೆ. ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ. ​

ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಹುಡುಕಾಡಿದಾಗ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. 2018ರ ಸೆಪ್ಟೆಂಬರ್​ 28ರಂದು ಬ್ರೆಜಿಲಿಯನ್​ ಏರ್​ ಫೋರ್ಸ್​ ಇದೇ ವಿಡಿಯೋವನ್ನು ಟ್ವೀಟ್​ ಮಾಡಿದೆ. ಟ್ವೀಟ್​ ಪೋರ್ಚುಗೀಸ್​​ ಭಾಷೆಯಲ್ಲಿದ್ದು, ಅದರ ಸಾರ ಹೀಗಿದೆ... ಬ್ರೆಜಿಲಿಯನ್​ ಏರ್​ ಫೋರ್ಸ್​ನ ಎಫ್​-5 ಜೆಟ್​ ವಿಮಾನವು ಬ್ರೆಜಿಲಿಯನ್​ ನೌಕಾಪಡೆಯ ಎ-4 ಜೆಟ್​ ವಿಮಾನಕ್ಕೆ ಇಂಧನ ತುಂಬುವ ಕಾರ್ಯ ನಿರ್ವಹಿಸುತ್ತಿದೆ ಎಂದು ಬರೆಯಲಾಗಿದೆ.

ಅಂದಹಾಗೆ ರಫೇಲ್​ ಜೆಟ್​ ಭಾರತಕ್ಕೆ ಬರುವಾಗಲೂ ಸಹ ಮಾರ್ಗ ಮಧ್ಯೆ ಇಂಧನ ತುಂಬಿರುವುದು ಸತ್ಯ. ಆದರೆ, ಯಾವುದೇ ವಿಡಿಯೋ ಇಲ್ಲ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಭಾರತೀಯ ವಾಯುಸೇನೆ 2020 ಜುಲೈ 29ರಂದು ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಆದರೆ, ವೈರಲ್​ ಆಗಿರುವ ವಿಡಿಯೋ ರಫೇಲ್​ ಜೆಟ್​ ವಿಮಾನಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಎರಡು ವರ್ಷದ ಹಿಂದಿನದ್ದು. ಬ್ರೆಜಿಲ್​ ವಾಯುಸೇನೆಗೆ ಸೇರಿದ್ದು ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಹಿರಂಗವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net