FACT CHECK | ಪ್ರತಿಭಟನಾ ನಿರತ ರೈತರು ತಿರಂಗಾಕ್ಕೆ ಅವಮಾನ ಮಾಡಿದ್ರಾ?!

fact check
Published on

ಬೆಂಗಳೂರು: ದೆಹಲಿಯಲ್ಲಿ ರೈತ ಪ್ರತಿಭಟನೆಯ ಕಾವು ತೀವ್ರಗೊಂಡಿದ್ದು, ಬಹುತೇಕರು ಪಂಜಾಬ್, ಹರಿಯಾಣ ಭಾಗದವರಾದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಸಿಖ್ಖ್ ಪೇಟಾ ತೊಟ್ಟವರು ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ್ದಾರೆ ಎಂಬುದನ್ನು ಬಿಂಬಿಸುವ ಫೋಟೋ ವೈರಲ್ ಆಗಿದೆ. ಒಂದಿಬ್ಬರು ರಾಷ್ಟ್ರಧ್ವಜದ ಮೇಲೆ ನಿಂತಿದ್ದರೆ, ಇನ್ನೊಬ್ಬರು ಅದಕ್ಕೆ ಶೂ ಬಿಚ್ಚಿ ಹೊಡೆಯುತ್ತಿರುವ ದೃಶ್ಯ ಫೋಟೋದಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋಕ್ಕೆ ಹಿಂದಿ ಭಾಷೆಯಲ್ಲಿ ನೀಡಿರುವ ಕ್ಯಾಪ್ಶನ್​ನಲ್ಲಿ ರೈತ ಚಳವಳಿ ಎಂದರೆ ರಾಷ್ಟ್ರಧ್ವಜವನ್ನು ಅವಮಾನಿಸುವುದು ಎಂದಾದರೆ, ನಾನು ಅದರಲ್ಲಿ ಭಾಗವಹಿಸುವುದಿಲ್ಲ. ಅಂತಹ ರೈತ ಚಳವಳಿಯ ಬಗ್ಗೆ ಧಿಕ್ಕಾರವಿದೆ!. ಈ ಜನರಾರೂ ರೈತರಾಗಿರಲು ಸಾಧ್ಯವೇ ಇಲ್ಲ. ಅವರು ದ್ರೋಹಿಗಳು, ಅವರನ್ನು ರಾಷ್ಟ್ರದ್ರೋಹದ ಕೇಸ್​ನಲ್ಲಿ ಬಂಧಿಸಬೇಕು ಎಂದಿದೆ.

ಇದರ ನಿಜಾಂಶ ಪತ್ತೆಗೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವೈರಲ್ ಫೋಟೋ ದಲ್ ಖಲ್ಸಾ ಯುಕೆ ಎಂಬ ಹೆಸರಿನ ಬ್ಲಾಗ್​ನಲ್ಲಿ ಪತ್ತೆಯಾಗಿದೆ. ಈ ರೀತಿ ರಾಷ್ಟ್ರಧ್ವಜಕ್ಕೆ ಅವಮಾನವೆಸಗುವ ಇನ್ನೂ ಕೆಲವು ಫೋಟೋಗಳು ಬ್ಲಾಗ್​ನಲ್ಲಿವೆ. ಈ ಚಿತ್ರ 2013ರ ಆಗಸ್ಟ್​ 17ರಂದು ಪ್ರಕಟವಾಗಿದೆ. ಲಂಡನ್​​ನಲ್ಲಿರುವ ಭಾರತದ ರಾಯಭಾರ ಕಚೇರಿ ಎದುರು 2013ರ ಆಗಸ್ಟ್ 15ರಂದು ಸಿಖ್ಖ್, ಕಾಶ್ಮೀರಿ ಮತ್ತು ಇತರೆ ಅಲ್ಪಸಂಖ್ಯಾತರ ಗುಂಪು ಪ್ರತಿಭಟನೆ ನಡೆಸಿದ ವೇಳೆ ಈ ಪೋಟೋ ಕ್ಲಿಕ್ಕಿಸಲಾಗಿತ್ತು. ಈ ಬ್ಲಾಗ್​ ದಲ್ ಖಲ್ಸಾ ಯುಕೆಗೆ ಸೇರಿದ್ದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರೈತ ಪ್ರತಿಭಟನೆಗೆ ಇದನ್ನು ಲಿಂಕ್ ಮಾಡುವಾಗ ದಲ್ ಖಲ್ಸಾ ಯುಕೆ ಲೋಗೊವನ್ನು ಕ್ರಾಪ್ ಮಾಡಲಾಗಿದೆ. ಸುಳ್ಳು ಸುದ್ದಿಗಳಿವು..

ಆದ್ದರಿಂದ ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೂ ಈ ವೈರಲ್ ಫೋಟೋಗೂ ಯಾವುದೇ ಸಂಬಂಧ ಇಲ್ಲ. ಇದು ಸುಳ್ಳು ಸುದ್ದಿಯಾಗಿದ್ದು, ಶೇರ್ ಮಾಡುವ ಮುನ್ನ ಎಚ್ಚರಿಕೆ ಇರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net