ಕೊನೆಗೂ ಚಿಂಟು ಪ್ರತಿಕ್ರಿಯಿಸಲೇ ಇಲ್ಲ ... ರಿಷಿ ಕಪೂರ್ ದೇಹ; ಕರಣ್ ಜೋಹರ್ ಮುಖ

Karan Johar Final
Published on

‘ಸಖತ್ತಾಗಿದೆ ... ಅಪ್ಪ ಇದಕ್ಕೆ ಹೇಗೆ ರಿಯಾಕ್ಟ್ ಮಾಡ್ತಾರೋ ನೋಡಬೇಕು ...’

ಹಾಗಂತ ಮೂರು ದಿನಗಳ ಹಿಂದೆ ರಿಷಿ ಕಪೂರ್ ಮಗಳು, ರಿದ್ದೀಮಾ ಕಪೂರ್ ಹೇಳಿಕೊಂಡಿದ್ದರು. ಆದರೆ, ಚಿಂಟು ಇದಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ಚಿಂಟು ಯಾರು ಅಂತೀರಾ? ಕುಟುಂಬದವರು ರಿಷಿ ಕಪೂರ್ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದುದು ಚಿಂಟು ಅಂತಲೇ.

ಇಷ್ಟಕ್ಕೂ ಆಗಿದ್ದೇನೆಂದರೆ, ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ಎರಡು ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಒಂದು ವೀಡಿಯೋ ಹಂಚಿಕೊಂಡಿದ್ದರು. ರಿಷಿ ಕಪೂರ್ ಅಭಿನಯದ ‘ಬಾಬ್ಬಿ’ ಚಿತ್ರದ ‘ಮೇ ಶಾಯರ್ ಥೋ ನಹೀ ...’ ಎಂಬ ಹಾಡಿನಲ್ಲಿ ರಿಷಿ ಕಪೂರ್ ಎಲ್ಲೆಲ್ಲಿ ಇದ್ದಾರೋ, ಅವರ ಮುಖಕ್ಕೆ ಫೇಸ್​ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಕರಣ್ ಮುಖ ಅಂಟಿಸಲಾಗಿದೆ. ಹಳೆಯ ಹಾಡಿನಲ್ಲಿ ರಿಷಿ ಕಪೂರ್ ಇದ್ದರೆ, ಹೊಸ ಹಾಡಿನಲ್ಲಿ ರಿಷಿ ಬದಲು ಕರಣ್ ಅವರನ್ನು ನೋಡಬಹುದು. ಈ ಹಾಡು ಕೆಲವು ದಿನಗಳಿಂದ ಸಖತ್ ವೈರಲ್ ಆಗಿದೆ.

ಈ ಹಾಡನ್ನು ಬಾಲಿವುಡ್ ಸೆಲೆಬ್ರಿಟಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಪ್ರೀತಿ ಜಿಂಟಾ, ಕಾಜೋಲ್, ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ ... ಮುಂತಾದವರೆಲ್ಲಾ ಹೊಸ ಹಾಡನ್ನು ಕೊಂಡಾಡಿದ್ದಾರೆ. ರಿಷಿ ಕಪೂರ್ ಮಗಳು ರಿದ್ದೀಮಾ ಕಪೂರ್ ಸಹ ಈ ಹೊಸ ತಂತ್ರಜ್ಞಾನದ ಹಾಡನ್ನು ಮೆಚ್ಚುವುದರ ಜತೆಗೆ, ತನ್ನಪ್ಪ ಇದಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆ ಎಂದು ಕುತೂಹಲ ವ್ಯಕ್ತಪಡಿಸಿದ್ದರು. ನಿಜಜೀವನದಲ್ಲಿ ಮಹಾನ್ ಮುಂಗೋಪಿಯಾಗಿದ್ದ ರಿಷಿ ಕಪೂರ್, ಇಂಥದ್ದನ್ನೆಲ್ಲಾ ಸಹಿಸುವುದು ಕಡಿಮೆಯೇ. ಹೀಗಿರುವಾಗ ಅವರು ಹೇಗೆ ಪ್ರತಿಕ್ರಯಿಸುತ್ತಾರೆ ಎಂಬ ಕುತೂಹಲ ರಿದ್ದೀಮಾಗೆ ಸೇರಿದಂತೆ ಎಲ್ಲರಿಗೂ ಇತ್ತು. ಆದರೆ, ಪ್ರತಿಕ್ರಿಯಿಸುವುದಕ್ಕಿಂತ ಮುನ್ನವೇ ಚಿಂಟು ಹೊರಟುಹೋಗಿದ್ದಾರೆ. ಬಹುಶಃ ಈ ಹಾಡನ್ನು ನೋಡಿದ್ದರೆ ಅವರು ಖುಷಿಪಡುತ್ತಿದ್ದರೇನೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net