

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಬಲವರ್ಧನೆಗೆ ಜೆಡಿಎಸ್ ರೂಪುರೇಷೆ ಸಿದ್ಧಗೊಳಿಸುತ್ತಿದೆ. ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಮೂಲಕ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಸಜ್ಜಾಗಿದೆ. ಈಗಾಲೇ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮತ್ತಿತರ ಅಸಗಳನ್ನು ಝಳಪಿಸುತ್ತಿದೆ. ಹಾಗಾಗಿ ಜೆಡಿಎಸ್ ಕೂಡ ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ನಿರ್ಧರಿಸಿದೆ. ಪ್ರಮುಖವಾಗಿ ಸರ್ಕಾರದ ಐದು ಗ್ಯಾರಂಟಿಗಳ ಜಾರಿಯಲ್ಲಿನ ವೈಫಲ್ಯ, ನೀರಾವರಿ ನಿರ್ಲಕ್ಷ್ಯ, ಶಾಸಕರ ಅನುದಾನ ಹಂಚಿಕೆ, ಅಭಿವೃದ್ಧಿ ಕೆಲಸಗಳಿಂದ ವಿಮುಖತೆಗಳನ್ನು ಜನರ ಮುಂದಿಡಲು ಆಲೋಚಿಸಿದೆ. ಅವುಗಳ ಜತೆ ಆಡಳಿತ ವೈಲ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ದಲಿತರ ಸುರಕ್ಷತೆಗಳನ್ನು ಕೂಡ ಹೋರಾಟಕ್ಕೆ ವಿಷಯ ವಸ್ತುವನ್ನಾಗಿಸಲು ಚಿಂತನೆ ನಡೆದಿದೆ.
ತಾಲೂಕು, ಹೋಬಳಿ ಮಟ್ಟದಲ್ಲಿ ಪಕ್ಷದ ವಿವಿಧ ಘಟಕಗಳನ್ನು ಬಳಸಿಕೊಂಡು ಕಾರ್ಯಕರ್ತರನ್ನು ಒಗ್ಗೂಡಿಸಿ ತಳಮಟ್ಟದಿಂದ ಪ್ರತಿಭಟನೆ, ಧರಣಿ, ಹೋರಾಟ ಮತ್ತಿತರ ಮಾರ್ಗಗಳ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ತಂತ್ರಗಾರಿಕೆ ರೂಪಿಸುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಾಜ್ಯಮಟ್ಟದಲ್ಲಿ ಸಭೆಗಳನ್ನು ಮಾತ್ರ ಮಾಡಲಾಗಿದೆ. ತಳಮಟ್ಟದಲ್ಲಿ ಇನ್ನೂ ಕಾರ್ಯಕರ್ತರನ್ನು ಬಡಿದೆಬ್ಬಿಸುವ ಕೆಲಸವಾಗಿಲ್ಲ. ಹಾಗಾಗಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಿ ಆ ಮೂಲಕ ಕಾರ್ಯಕರ್ತರು, ಮುಖಂಡರನ್ನು ಜ್ವಲಂತ ಸಮಸ್ಯೆಗಳ ವಿರುದ್ಧ ಜೀವಂತವಾಗಿಡುವ ಕೆಲಸಕ್ಕೆ ಜೆಡಿಎಸ್ ಕೈಹಾಕಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಂಗಾಪುರದಿಂದ ವಾಪಸ್ ಬಂದ ಬಳಿಕ ರಾಜ್ಯಮಟ್ಟದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರ ಜತೆ ಸಭೆ ನಡೆಸಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಭೂಮಿಕೆಯನ್ನು ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾದಯಾತ್ರೆ, ಪ್ರತಿಭಟನೆ, ಧರಣಿ ಮತ್ತಿತರ ಮಾರ್ಗಗಳ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ಜನರ ಬೇಡಿಕೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರು ಯೋಚನೆ ಮಾಡುತ್ತಿದ್ದಾರೆ.
ಕಾಂಗ್ರೆಸ್, ಬಿಜೆಪಿಗಳು ಲೋಕಸಭೆ ಚುನಾವಣೆಗೆ ಈಗಾಗಲೇ ಒಳಗೊಳಗೆ ತಯಾರಿ ನಡೆಸಿವೆ. ಆದರೆ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಸೀಟು ಹಂಚಿಕೆ ಆಗಬೇಕಿದೆ. ಅದಾದ ಬಳಿಕವೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.
ಮುಂದಿನ ವಾರ ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಗೆ ಸೀಟುಗಳನ್ನು ಅಖೈರು ಮಾಡಿಕೊಂಡು ಬರಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.