

ಕಾರವಾರ/ಹೊನ್ನಾವರ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸೋಮವಾರ ಭಾರಿ ಮಳೆಯಾಗಿದೆ. ಫಸಲು ಕೈಗೆ ಬರುವ ಸಮಯದಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರು ಆತಂಕಿತರಾಗಿದ್ದಾರೆ. ಮಳೆಗಾಲದಲ್ಲಿ ಅನಾವೃಷ್ಟಿಯ ಕಾರಣ ಉಂಟಾಗಬಹುದಾಗಿದ್ದ ನೀರಿನ ಬವಣೆಗೆ ಈ ಮಳೆಯಿಂದ ಪರಿಹಾರ ಸಿಗಬಹುದು ಎಂದು ಜನ ಖುಷಿಯಾಗಿದ್ದಾರೆ. ನ.9 ರವರೆಗೂ ಹವಾಮಾನ ವೈಪರೀತ್ಯದ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಜಿಲ್ಲೆಯ ಭಟ್ಕಳ, ಹೊನ್ನಾವರದಲ್ಲಿ ಭಾನುವಾರ ರಾತ್ರಿ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿತ್ತು. ಇದರಿಂದ ವಿವಿಧೆಡೆ ಹಾನಿ ಸಂಭವಿಸಿದೆ. ಹೊನ್ನಾವರದ ಮಂಕಿ ಅನಂತವಾಡಿಯ ತುಂಬೇಬೀಳು ಗ್ರಾಮದ ಶಾರದಾ ರಾಮಚಂದ್ರ ನಾಯ್ಕ ಅವರ ಮನೆಯು ಕುಸಿದು ಬಿದ್ದಿದೆ. ಮಣ್ಣಿನ ಗೋಡೆಯು ಕುಸಿದಿದ್ದು ಜನರು ಪರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಮರಗಳು ಬಿದ್ದಿವೆ.ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ ಭಟ್ಕಳದಲ್ಲಿ ಭಟ್ಕಳದಲ್ಲಿ 66, ಹೊನ್ನಾವರ 16.3, ಕುಮಟಾ-15, ಸಿದ್ದಾಪುರ-15.2, ಶಿರಸಿ-2.5, ಅಂಕೋಲಾ-2.6 ಮಿಮೀ ಮಳೆಯಾಗಿದೆ.
ಮತ್ತೆ ಮಳೆ:
ಸೋಮವಾರ ಸಾಯಂಕಾಲ ಮತ್ತೆ ಜಿಲ್ಲೆಯ ವಿವಿಧೆಡೆ ಗುಡುಗು ಸಮೇತ ಧಾರಾಕಾರ ಮಳೆಯಾಗಿದೆ. ಕುಮಟಾ, ಸಿದ್ದಾಪುರ, ಹಳಿಯಾಳ, ಹೊನ್ನಾವರದಲ್ಲಿ ಭಾರಿ ಮಳೆಯಾಗಿದೆ. ಶಿರಸಿ, ಯಲ್ಲಾಪುರ, ಭಾಗದಲ್ಲಿ ತುಂತುರು ಮಳೆಯಾಗಿದೆ. ಕಾರವಾರ ಅಂಕೋಲಾದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಳೆಯಿಂದ ಸಿದ್ದಾಪುರ, ಕುಮಟಾ, ಹೊನ್ನಾವರದ ವಿವಿಧೆಡೆ ತಂತಿಗಳ ಮೇಲೆ ಮರಗಳು ಬಿದ್ದು, ವಿದ್ಯುತ್ ಕಡಿತವಾಗಿತ್ತು. ಹಳಿಯಾಳದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು.
ಮುನ್ನೆಚ್ಚರಿಕೆ:
ನವೆಂಬರ್ 9 ರವರೆಗೆ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಸಾಂಪ್ರದಾಯಿಕ ಮೀನುಗಾರರು ದಡದಲ್ಲಿ ನಿಲ್ಲಿಸಿಟ್ಟ ದೋಣಿಗಳು ಹಾಗೂ ಬಲೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.