

Bulldozer action : ಆರೋಪಿಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಬುಲ್ಡೋಜರ್ನಿಂದ ನೆಲಸಮ ಮಾಡುವ ಕ್ರಮವನ್ನು ಬಲವಾಗಿ ಖಂಡಿಸಿರುವ ಸುಪ್ರೀಂಕೋರ್ಟ್, ಕಾರ್ಯಾಂಗವು ನ್ಯಾಯಾಂಗವನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಮತ್ತು ಅಪರಾಧದ ಆರೋಪ ಹೊತ್ತಿದ್ದಾರೆ ಎಂಬ ಕಾರಣಕ್ಕೆ ಆರೋಪಿಗಳ ಮನೆಯನ್ನು ಕೆಡವಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದೆ. ಅಲ್ಲದೆ, ಬುಲ್ಡೋಜರ್ ಕ್ರಮಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಧಿಕಾರಿಗಳೇ ಬೆಲೆ ತೆರಬೇಕಾಗುತ್ತದೆ ಎಂದು ಉನ್ನತ ನ್ಯಾಯಾಲಯ ಬುಧವಾರ (ಅ.13) ಎಚ್ಚರಿಸಿದೆ.
ಆರೋಪಿಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಆರ್ ಗವಾಲ್ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಕೇವಲ ಆರೋಪದ ಮೇಲೆ ನಾಗರಿಕರ ಮನೆಯನ್ನು ಅನಿಯಂತ್ರಿತವಾಗಿ ಕೆಡವುವುದು ಕಾನೂನಿನ ಉಲ್ಲಂಘನೆಯಾಗಿದೆ. ಕಾರ್ಯಾಂಗದ ಅಡಿಯಲ್ಲಿ ಕೆಲಸ ಮಾಡುವವರು ತೀರ್ಪಿನ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಅಲ್ಲದೆ, ನ್ಯಾಯಯುತ ವಿಚಾರಣೆಯಿಲ್ಲದೆ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ. ಆರೋಪಿಗಳು ಅಥವಾ ಶಿಕ್ಷೆಗೊಳಗಾದವರು ಸೇರಿದಂತೆ ಎಲ್ಲರಿಗೂ ಲಭ್ಯವಿರುವ ರಕ್ಷಣೆಗಳನ್ನು ಕಾನೂನು ಬಲಪಡಿಸುತ್ತದೆ. ಈ ಬುಲ್ಡೋಜರ್ ಕ್ರಮವು ಮೂಲಭೂತ ಕಾನೂನು ತತ್ವಗಳನ್ನು ಅಡ್ಡಿಪಡಿಸುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದಾಗ ಅದರ ಪರಿಣಾಮಕ್ಕೆ ಅವರೇ ಜವಾಬ್ದಾರರಾಗಿರಬೇಕು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಒತ್ತಿ ಹೇಳಿತು. ಇಂತಹ ಅನಿಯಂತ್ರಿತ ಕ್ರಮಗಳು, ವಿಶೇಷವಾಗಿ ನ್ಯಾಯಾಂಗ ಆದೇಶವಿಲ್ಲದಿದ್ದರೂ ಬುಲ್ಡೋಜರ್ ಕ್ರಮ ತೆಗೆದುಕೊಂಡರೆ ಅದು ಕಾನೂನಿನ ನಿಯಮವನ್ನು ದುರ್ಬಲಗೊಳಿಸುತ್ತವೆ. ಒಂದು ಕುಟುಂಬದಲ್ಲಿ ಒಬ್ಬ ಆರೋಪಿಯಾಗಿದ್ದರೆ ಇಡೀ ಮನೆಯನ್ನು ಕೆಡುವುದು ಸರಿಯೇ? ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಧಿಕಾರಿಗಳನ್ನು ಬಿಡುವುದಿಲ್ಲ. ಇಂತಹ ಕ್ರಮಗಳು ನಡೆದರೆ ಅಧಿಕಾರಿಗಳೇ ತಮ್ಮ ಸಂಬಳದಲ್ಲಿ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಉನ್ನತ ನ್ಯಾಯಾಲಯ ಎಚ್ಚರಿಸಿದೆ.
ಬುಲ್ಡೋಜರ್ ಕ್ರಮಕ್ಕೆ ಮಾರ್ಗಸೂಚಿ
ಬುಲ್ಡೋಜರ್ ಕ್ರಮದ ಸಂಬಂಧ ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಇದೇ ಸಂದರ್ಭದಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ವಿವರಿಸಿದೆ. ಈ ನಿಯಮಗಳಿಗೆ ಬದ್ಧವಾಗದೆ ಯಾವುದೇ ನೆಲಸಮ ಮಾಡಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿದೆ. ನ್ಯಾಯಾಲಯದ ಮಾರ್ಗಸೂಚಿ ಈ ಕೆಳಕಂಡಂತಿವೆ.
* ಸಾರ್ವಜನಿಕ ರಸ್ತೆ, ರೈಲು ಮಾರ್ಗ ಅಥವಾ ಜಲಮೂಲದಲ್ಲಿ ಯಾವುದೇ ಅನಧಿಕೃತ ಕಟ್ಟಡಗಳು ಇದ್ದರೆ ಮಾರ್ಗಸೂಚಿಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
* ಯಾವುದೇ ಕಟ್ಟಡ ಕೆಡವುದಕ್ಕೂ ಮುನ್ನ 15 ದಿನಗಳ ಕಾಲ ನೋಟಿಸ್ ನೀಡುವಂತೆ ಕೋರ್ಟ್ ಸೂಚಿಸಿದೆ. ಶೋಕಾಸ್ ನೋಟಿಸ್ ಜಾರಿ ಮಾಡಬೇಕು ಮತ್ತು ನೋಟಿಸ್ಗಳನ್ನು ಟ್ರ್ಯಾಕ್ ಮಾಡಲು ಮೂರು ತಿಂಗಳೊಳಗೆ ಡಿಜಿಟಲ್ ಪೋರ್ಟಲ್ ಅನ್ನು ಸ್ಥಾಪಿಸಲಾಗುವುದು. ಈ ಪೋರ್ಟಲ್ ನೋಟಿಫಿಕೇಶನ್ ಮತ್ತು ಸೈಟ್ನಲ್ಲಿ ಅದನ್ನು ಪ್ರದರ್ಶಿಸಿದ ದಿನಾಂಕದ ಕುರಿತು ವಿವರಗಳನ್ನು ಒಳಗೊಂಡಿರುತ್ತದೆ. ಪ್ರತಿ ನೋಟಿಫಿಕೇಶನ್ ಕೆಡವಲು ಕಾರಣಗಳನ್ನು ಮತ್ತು ವಿಚಾರಣೆಯ ದಿನಾಂಕವನ್ನು ಸ್ಪಷ್ಟವಾಗಿ ಸೂಚಿಸಬೇಕು.
* ಆಸ್ತಿ ಮಾಲೀಕರು ಅಥವಾ ಮಾಲೀಕರಿಗೆ ವೈಯಕ್ತಿಕ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯವು ಕಡ್ಡಾಯಗೊಳಿಸಿದೆ. ಮಾಲೀಕರ ಸಲ್ಲಿಕೆಗಳನ್ನು ಪರಿಗಣಿಸಲಾಗುತ್ತದೆ. ಅಪರಾಧವು ಸಂಯೋಜಿತವಾಗಿದೆಯೇ ಅಥವಾ ಕೆಡವಲು ಸಾಧ್ಯವೇ ಎಂಬುದನ್ನು ಅಧಿಕಾರಿಗಳು ನಿರ್ಣಯಿಸಬೇಕು. ಅಲ್ಲದೆ, ನೆಲಸಮ ಮಾಡುವುದು ಅಗತ್ಯ ಏಕೆ ಎಂಬುದರ ಸ್ಪಷ್ಟ ವಿವರಣೆಯನ್ನು ಒಳಗೊಂಡಿರಬೇಕು.
* ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಅಧಿಕಾರಿಗಳು ನ್ಯಾಯಾಲಯದ ನಿಂದನೆಗಾಗಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಮರುಪಾವತಿಗಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.