ಮುಂಬೈನಲ್ಲಿ ಕ್ಯಾಟರಿಂಗ್ ಉದ್ಯಮಿಗೆ ಚೈತಾ ಕುಂದಾಪುರ ಗ್ಯಾಂಗ್‌ ವಂಚಿಸಿದ ರೋಚಕ ಕತೆ..!

chaitra
Published on

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ 5 ಕೋಟಿ ರೂ. ಪಡೆದು ವಂಚಿಸಿದ ಆರೋಪದಲ್ಲಿ ಹಿಂದು ಕಾರ್ಯಕರ್ತೆ ಸೇರಿ 6 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಬಾಬ್ ಮಾರುವ ಹಾಗೂ ಸಲೂನ್ ಶಾಪ್‌ನಲ್ಲಿರುವ ವ್ಯಕ್ತಿಗಳಿಗೆ ಒಂದಷ್ಟು ಹಣ ಕೊಟ್ಟು ಆರ್‌ಎಸ್‌ಎಸ್ ಪ್ರಮುಖರು ಮತ್ತು ಕೇಂದ್ರದ ನಾಯಕರಂತೆ ನಟನೆ ಮಾಡಿಸಿ ವಂಚಿಸಿದ್ದರೆಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉಡುಪಿಯ ಕುಂದಾಪುರ ನಿವಾಸಿ ಚೈತ್ರಾ ಕುಂದಾಪುರ, ಚಿಕ್ಕಮಗಳೂರಿನ ಕಡೂರು ನಿವಾಸಿ ಗಗನ್ ಕಡೂರ್, ಚಿಕ್ಕಮಗಳೂರಿನ ರಮೇಶ್ ಅಲಿಯಾಸ್ ವಿಶ್ವನಾಥ್, ಧರ್ಮರಾಜ್, ಕೆ.ಆರ್.ಪುರದ ಚೆನ್ನನಾಯ್ಕ ಅಲಿಯಾಸ್ ನಾಯ್ಕ ಮತ್ತು ಉಡುಪಿಯ ಶ್ರೀಕಾಂತ್ ಬಂಧಿತರು. ಪ್ರಕರಣದಲ್ಲಿ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಹೆಸರೂ ಕೇಳಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಹರಳೂರು ರಸ್ತೆ ನಿವಾಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಸೆ.8ರಂದು ಬಂಡೇಪಾಳ್ಯ ಠಾಣೆಗೆ ನೀಡಿದ ದೂರಿನ ಮೇರೆಗೆ ಎ್ಐಆರ್ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಉಡುಪಿ, ಕಲುಬುರಗಿ ಮತ್ತು ಚಿಕ್ಕಮಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ಸೆ.23ರವರೆಗೆ ಕೋರ್ಟ್ ಸಿಸಿಬಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ವಂಚನೆ ಹೇಗೆ?

ಬೆಂಗಳೂರು ಮತ್ತು ಮುಂಬೈನಲ್ಲಿ ಕ್ಯಾಟರಿಂಗ್ ಸವೀರ್ಸ್ ನಡೆಸುತ್ತಿರುವ ಗೋವಿಂದ ಬಾಬು ಪೂಜಾರಿ

ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇವರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಹುಟ್ಟಿ, ಬಿಜೆಪಿ ಕಾರ್ಯಕರ್ತ ಪ್ರಸಾದ್ ಬೈಂದೂರು ಮೂಲಕ ಚೈತ್ರಾ ಕುಂದಾಪುರ ಅವರನ್ನು ಭೇಟಿ ಮಾಡಿದ್ದರು. 2023ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಚೈತ್ರಾ ಕುಂದಾಪುರ, ನನಗೆ ಬಿಜೆಪಿ, ಆರ್‌ಎಸ್‌ಎಸ್ ಮುಖಂಡರು ಪರಿಚಯವಿದ್ದಾರೆ. ಪ್ರಧಾನಿ ಕಚೇರಿಯಲ್ಲಿ ಮತ್ತು ಸುಪ್ರೀಂ ಕೋರ್ಟ್ ಜಡ್ಜ್‌ಗಳು ಆಪ್ತರಿದ್ದಾರೆ. ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಮೂಲಕ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2022ರ ಜು.4ಕ್ಕೆ ಚಿಕ್ಕಮಗಳೂರಿಗೆ ಕರೆಸಿಕೊಂಡಿದ್ದರು.

ಸರ್ಕಾರಿ ಅತಿಥಿ ಗೃಹದಲ್ಲಿ ಗೋವಿಂದ ಬಾಬುನನ್ನು ಭೇಟಿ ಮಾಡಿದ ಗಗನ್ ಕಡೂರು ‘ಪ್ರಧಾನಿ ಮತ್ತು ಗೃಹ ಸಚಿವಾಲಯ ಅಧಿಕಾರಿಗಳಿಗೆ ನಿಕಟವರ್ತಿ ಆಗಿದ್ದೇನೆ. ಆರ್‌ಎಸ್‌ಎಸ್ ಹಿರಿಯ ಪ್ರಚಾರಕ್ ವಿಶ್ವನಾಥ್ ಜೀ ಮೂಲಕ ನಿಮ್ಮ ಹೆಸರು ಶಿಾರಸು ಮಾಡಿಸುತ್ತೇನೆ ಎಂದು ಹೇಳಿ, ಅದೇ ದಿನ ವಿಶ್ವಾನಾಥ್‌ನನ್ನು ಭೇಟಿ ಮಾಡಿಸಿದ್ದರು. ಬಿಜೆಪಿ ಕೇಂದ್ರ ಆಯ್ಕೆ ಸಮಿತಿ ಸದಸ್ಯನಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಮನ್ವಯ ವಿಭಾಗ ಪ್ರಮುಖ್ ಆಗಿದ್ದೇನೆ. ಗಗನ್ ಕಡೆಗೆ 3.50 ಕೋಟಿ ರೂ. ಕೊಡಬೇಕೆಂದು ವಿಶ್ವನಾಥ್ ಹೇಳಿದ್ದ.

ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಹಣ ವಾಪಸ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು. 2022 ಜು.7ರಂದು ಶಿವಮೊಗ್ಗ ಆರ್‌ಎಸ್‌ಎಸ್ ಕಚೇರಿ ಬಳಿ ಗಗನ್ ಕಡೂರ್‌ಗೆ ದೂರುದಾರ 50 ಲಕ್ಷ ರೂ. ಕೊಟ್ಟಿದ್ದರು. 2022 ಸೆಪ್ಟೆಂಬರ್‌ನಲ್ಲಿ ಕರೆ ಮಾಡಿದ ಚೈತ್ರಾ, ಗಗನ್ ಮತ್ತು ವಿಶ್ವನಾಥ್, ಟಿಕೆಟ್ ಕೊಡಲು ಕೇಂದ್ರ ನಾಯಕರು ಒಪ್ಪಿದ್ದಾರೆ. ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಾಶ್ರೀ ಸ್ವಾಮೀ ಶಿಾರಸು ಮುಖ್ಯವಾಗಿದೆ. ಅವರನ್ನು ಭೇಟಿ ಮಾಡುವಂತೆ ಸೂಚಿಸಿದ್ದಳು. 2023ರ ಜನವರಿ 16ರಂದು ಸ್ವಾಮೀಜಿಯನ್ನು ಗೋವಿಂದ ಬಾಬು ಭೇಟಿ ಮಾಡಿ 1.50 ಕೋಟಿ ರೂ. ಕೊಟ್ಟಿದ್ದರು.

ಇದಕ್ಕೂ ಮೊದಲು ಕುಮಾರ ಕೃಪಾ ಸರ್ಕಾರಿ ಅತಿಥಿ ಗೃಹಕ್ಕೆ ಗೋವಿಂದ ಬಾಬುನನ್ನು ಕರೆದು ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಎಂದು ನಾಯ್ಕನನ್ನು ಪರಿಚಯಿಸಿದ್ದರು. ಆತ ಸಹ 3 ಕೋಟಿ ರೂ.ಗೆ ಬೇಡಿಕೆ ಒಡ್ಡಿದ್ದ. ನಂಬಿದ ಗೋವಿಂದ ಬಾಬು 2022ರ ಅ.29ರಂದು ಗಗನ್ ಕಡೂರ್ ಮತ್ತು ಚೈತ್ರಾ ಗ್ಯಾಂಗ್‌ಗೆ ಮಂಗಳೂರಿನಲ್ಲಿ 3 ಕೋಟಿ ರೂ. ಒಪ್ಪಿಸಿದ್ದರು.

ಚೈತ್ರಾ ಕುಂದಾಪುರ, ಮಾ.8ರಂದು ಗೋವಿಂದ ಬಾಬುಗೆ ಕರೆ ಮಾಡಿ ವಿಶ್ವನಾಥ್‌ಜೀ ಅನಾರೋಗ್ಯದಿಂದ ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಳು. ಅನುಮಾನ ಬಂದು ದೂರುದಾರ, ಏ.24ರಂದು ಆರೋಪಿಗಳನ್ನು ಬೊಮ್ಮನಹಳ್ಳಿಯ ಕಚೇರಿಗೆ ಕರೆದು ಪ್ರಶ್ನಿಸಿದಾಗ ವಾಪಸ್ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದರು. ಸ್ವಾಮೀಜಿ ಸಹ 1.50 ಕೋಟಿ ರೂ. ಹಿಂತಿರುಗಿಸುವುದಾಗಿ ಹೇಳಿ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ಗೋವಿಂದ ಬಾಬು, ಕೊನೆಗೆ ಬಂಡೇಪಾಳ್ಯ ಪೊಲೀಸರ ಮೊರೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿನಿಮಾವನ್ನೇ ಮೀರಿಸುವ ಪ್ಲ್ಯಾನ್?

ಆರ್‌ಎಸ್‌ಎಸ್ ಪ್ರಚಾರಕ್ ಪಾತ್ರಕ್ಕೆ ರೈತ ರಮೇಶ್ ಎಂಬಾತನಿಗೆ 1.20 ಲಕ್ಷ ರೂ. ಕೊಟ್ಟು ಒಪ್ಪಿಸಿದ್ದರು. ಚಿಕ್ಕಮಗಳೂರು ಕಡೂರಿನ ಸಲೂನ್‌ಗೆ ರಮೇಶ್‌ನನ್ನು ಕರೆದೊಯ್ದು ಮೇಕಪ್ ಮಾಡಿಸಿ ವಿಶ್ವನಾಥ್‌ಜೀ ಮಾಡಿದ್ದರು. ಚೈತ್ರಾ ಮತ್ತು ಗಗನ್ ಆತನಿಗೆ ಪ್ರಚಾರಕರು ಹೇಗೆ ಇರುತ್ತಾರೆ ಎನ್ನುವುದರ ಬಗ್ಗೆ ತರಬೇತಿ ಸಹ ಕೊಟ್ಟಿದ್ದರು. ಧನರಾಜ್‌ಗೆ 2.50 ಲಕ್ಷ ರೂ. ಕೊಟ್ಟು ಪ್ರಚಾರಕ್ ಜೊತೆಗ ಓಡಾಡಲು ಸೂಚಿಸಿದ್ದರು. ಕೆ.ಆರ್.ಪುರದಲ್ಲಿ ರಸ್ತೆಬದಿ ಚಿಕನ್ ಕಬಾಬ್ ಮಾರುವ ನಾಯ್ಕಗೆ 93 ಸಾವಿರ ರೂ. ಕೊಟ್ಟು ಬಿಜೆಪಿ ಕೇಂದ್ರದ ನಾಯಕನ ಪಾತ್ರ ಮಾಡುವಂತೆ ಮನವೊಲಿಸಿದ್ದರು. ನಟನೆ ಮುಗಿದ ಮೇಲೆ ಇದನ್ನು ಎಲ್ಲಿಯಾದರೂ ಬಾಯಿಬಿಟ್ಟರೆ ಕೊಲೆ ಮಾಡಿಸುತ್ತೇವೆ. ಜಡ್ಜ್‌ಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರುವಂತೆ ತೀರ್ಪು ಕೊಡಿಸುವುದಾಗಿ ನಾಯ್ಕಗೆ ಚೈತ್ರಾ ಮತ್ತು ಗಗನ್ ಬೆದರಿಕೆ ಒಡ್ಡಿದ್ದರು.

ಪ್ರಚಾರಕ್ ಸಾವಿನಿಂದ ಮೂಡಿದ ಶಂಕೆ

2023ರ ಮಾ.8ರಂದು ಗೋವಿಂದ ಬಾಬುಗೆ ಕರೆ ಮಾಡಿ ಕಾಶ್ಮೀರದಲ್ಲಿ ಪ್ರಚಾರಕ್ ವಿಶ್ವನಾಥ್‌ಜೀ, ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದ ಚೈತ್ರಾ, ಗಗನ್ ತನ್ನ ಪತ್ನಿ ಜತೆಗೆ ಕಾಶ್ಮೀರಕ್ಕೆ ಹೋಗುತ್ತಿದ್ದಾನೆ. ಅಲ್ಲಿಗೆ ತಲುಪಿದ ಮೇಲೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಳು. ಅದಕ್ಕೆ ಗೋವಿಂದ ಬಾಬು, ಅಂತಿಮ ದರ್ಶನಕ್ಕೆ ಪ್ರಧಾನಿ ಬರುತ್ತಾರ ಎಂದು ಕೇಳಿದಾಗ ಆರ್‌ಎಸ್‌ಎಸ್‌ನಲ್ಲಿ ಶವ ಸಂಸ್ಕಾರವನ್ನು ಗೌಪ್ಯವಾಗಿ ಮಾಡುತ್ತಾರೆ. ಪ್ರಚಾರ ಮಾಡುವುದಿಲ್ಲ ಎಂದು ಚೈತ್ರಾ ಉತ್ತರಿಸಿದ್ದಳು. ಅನುಮಾನಗೊಂಡ ಗೋವಿಂದ ಬಾಬು, ತನ್ನದೆ ನೆಟ್‌ವರ್ಕ್ ಮೂಲಕ ಇವರ ಬಗ್ಗೆ ವಿಚಾರಿಸುತ್ತಾ ಹೋದಾಗ ವಂಚನೆ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net