

ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಾಪಾರಿಯನ್ನು ಅಪಹರಣ ಮಾಡಿ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಬಾತ್ಮೀದಾರ ಸೇರಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಮೊಹಮ್ಮದ್ ಖಾಸಿಂ ಅಲಿಯಾಸ್ ಮುಜಾಹಿದ್,ಮುಕ್ತಿಯಾರ್, ವಸಿಂ, ಶಬ್ಬೀರ್ ಮತ್ತು ಶೋಯೆಬ್ ಬಂಧಿತರು. ಸೆ. 27ರಂದು ಜೆ.ಸಿ. ರಸ್ತೆಯ ಮೊಬೈಲ್ ರಿಪೇರಿ ಅಂಗಡಿ ಮಾಲೀಕ ಖಾಲು ಸಿಂಗ್ ಎಂಬಾತನನ್ನು ಅಪಹರಣ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ರಿಪೇರಿ ಅಂಗಡಿ ಮಾಲೀಕ ಖಾಲು ಸಿಂಗ್, ಕಾರನ್ನು ಗ್ಯಾರೇಜಿಗೆ ಬಿಟ್ಟಿದ್ದರು. ಗ್ಯಾರೇಜಿಗೆ ಹೋಗುತ್ತಿದ್ದಾಗ ವಿ.ವಿ. ಪುರ ಬಳಿ ಖಾಸಿಂ ಮತ್ತು ಆತನ ಏಳು ಸಹಚರರು ಖಾಲುನನ್ನು ಅಡ್ಡಗಟ್ಟಿ ಸುತ್ತುವರಿದಿದ್ದರು. ‘ನಾವು ಸಿಸಿಬಿ ಪೊಲೀಸರು’ ಎನ್ನುತ್ತ ವ್ಯಾಪಾರಿಯನ್ನು ಕಾರಿನ ಹಿಂಬದಿ ಸೀಟ್‌ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದ್ದರು.
‘ನೀನು ಗಾಂಜಾ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿಯಿದೆ’ ಎಂದು ಬೆದರಿಸಿ ಆತನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾರಿನಲ್ಲಿ ವಿಲ್ಸನ್ ಗಾರ್ಡನ್‌ನಲ್ಲಿನ ಪಾಳುಬಿದ್ದ ಮನೆಗೆ ಕರೆದೊಯ್ದಿದ್ದರು. ಖಾಲುಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಆತನ ಮೊಬೈಲ್ನಿಂದ ಸ್ನೇಹಿತನಿಗೆ ಕರೆ ಮಾಡಿಸಿ ‘ನಾವು ಸಿಸಿಬಿ ಪೊಲೀಸರು. 5 ಲಕ್ಷ ರೂ. ಕೊಟ್ಟರೆ ಯಾವುದೇ ಕೇಸ್ ದಾಖಲಿಸದೆ ಖಾಲುನನ್ನು ಬಿಡುತ್ತೇವೆ’ ಎಂದಿದ್ದರು.
ಖಾಲು ಸಿಂಗ್ ಸ್ನೇಹಿತರು ಭಯಗೊಂಡು ಪರಿಚಿತ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಸಿಸಿಬಿಗೆ ವಿಷಯ ರವಾನೆಯಾಗಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಆರೋಪಿಗಳು ಖಾಲುನನ್ನು ಬಿಟ್ಟು ಕಳುಹಿಸಿದ್ದರು. ಇದಾದ ನಂತರ ಸಿಸಿಬಿ ಪೊಲೀಸರಿಗೆ ಖಾಲು ಮಾಹಿತಿ ನೀಡಿದಾಗ ಆರೋಪಿಗಳ ಮುಖವಾಡ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಕೇಸ್‌ಗಳಿವೆ
ಮೊಹಮ್ಮದ್ ಖಾಸಿಂ ವಿರುದ್ಧ ನಗರದ ವಿವಿಧೆಡೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಎಸ್.ಪಿ.ರಸ್ತೆ. ಜೆ.ಸಿ. ಯಾವ ಅಂಗಡಿಯಲ್ಲಿ ನಕಲಿ ವಸ್ತುಗಳು ಮಾರಾಟ ಮಾಡುತ್ತಾರೆ. ಯಾವುದು ಅಕ್ರಮ ಎಂಬುದನ್ನು ತಿಳಿದು ಅವರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ. ಅಲ್ಲದೆ, ಪೊಲೀಸರಿಗೂ ಮಾಹಿತಿ ಕೊಟ್ಟು ಕೇಸ್ ಮಾಡಿಸುತ್ತಿದ್ದ ಎನ್ನಲಾಗಿದೆ.