

ಕಾರವಾರ: ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತ ಮಾಜಾಳಿ ತನಿಖಾ ಠಾಣೆಯ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಹಾಗೂ ಪೇದೆ ಹೇಮಚಂದ್ರ ಅವರನ್ನು ಅಮಾನತುಗೊಳಿಸಿ ಅಬಕಾರಿ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ಇದೇ ಆರೋಪದಡಿ ಇಬ್ಬರನ್ನು ಎರಡು ದಿನಗಳ ಹಿಂದೆ ಬೇರೆ ಜಿಲ್ಲೆಗಳಿಗೆ ನಿಯೋಜನೆಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ, ಅದಕ್ಕೆ ಒಪ್ಪದೇ ಲಾರಿ ಚಾಲಕರ ಸಂಘಟನೆಗಳು ಮಾಜಾಳಿ ತನಿಖಾ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಗೆ ಮಣಿದ ಅಬಕಾರಿ ಆಯುಕ್ತರು ಸಾಯಂಕಾಲ ಈ ಆದೇಶ ಹೊರಡಿಸಿದ್ದಾರೆ.
ಇಬ್ಬರೂ ಅಧಿಕಾರಿಗಳು ಲಾರಿ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವುದು, ಸಿಸಿ ಟಿವಿ ಫುಟೇಜ್ ಮೂಲಕ ಖಚಿತವಾಗಿದೆ. ಅಲ್ಲದೇ ಇನ್ಸ್‌ಪೆಕ್ಟರ್ ಸದಾಶಿವ ಕೊರ್ತಿ ಸಮವಸ್ತ್ರ ಧರಿಸದೇ ಕರ್ತವ್ಯ ನಿರ್ವಹಿಸಿ ಲೋಪ ಎಸಗಿದ್ದಾರೆ. ಇದರಿಂದ ತನಿಖೆ ಕಾಯ್ದಿರಿಸಿ ಅವರನ್ನು ಅಮಾನತು ಮಾಡಲಾಗಿದೆ. ಸದಾಶೀವ ಅವರ ಲೀನ್‌ನ್ನು ಹಾಸನ ಜಿಲ್ಲೆಗೆ ಹಾಗೂ ಹೇಮಚಂದ್ರ ಅವರ ಲೀನ್‌ನ್ನು ರಾಯಚೂರಿನ ಸಿಂಧನೂರಿಗೆ ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಹಿನ್ನೆಲೆ:
ಸೆ. 15 ರ ರಾತ್ರಿ ಗೋವಾದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಕರ್ನಾಟಕ-ಗೋವಾ ಗಡಿಯ ಮಾಜಾಳಿ ಸಂಯುಕ್ತ ತನಿಖಾ ಠಾಣೆಯಲ್ಲಿ ತಡೆದ ಈ ಇಬ್ಬರು ಅಬಕಾರಿ ಅಧಿಕಾರಿಗಳು, ಮದ್ಯ ಇದೆಯೇ ಎಂದು ತಪಾಸಣೆ ನಡೆಸಲು ಲಾರಿಗೆ ಹೊದೆಸುವ ಟಾರ್ಪಲ್ ಸರಿಸುವಂತೆ ಆದೇಶಿಸಿದ್ದರು. ಆದರೆ, ಲಾರಿ ಚಾಲಕ ಕುಮಾರ್ ಅದಕ್ಕೆ ನಿರಾಕರಿಸಿದ್ದಾಗ ಆತನ ಕಪಾಳಕ್ಕೆ ಹೊಡೆದಿದ್ದರು. ಆತನನ್ನು ಠಾಣೆಯ ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಇದರ ವಿಡಿಯೋಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಚಾಲಕ ಕುಮಾರ್ ವಿಡಿಯೋವೊಂದನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಅದನ್ನು ನೋಡಿದ ಕಾರವಾರ ಲಾರಿ ಚಾಲಕರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಕುಮಾರ್‌ರನ್ನು ಚಿತ್ತಾಕುಲಾ ಪೊಲೀಸ್ ಠಾಣೆಗೆ ಕರೆಸಿ, ದೂರು ದಾಖಲಿಸಿದ್ದರು. ಅಧಿಕಾರಿಯ ಕಾಲಿಗೆ ಬಿದ್ದ ನಂತರ ಅವರು ನನ್ನನ್ನು ಬಿಟ್ಟು ಕಳಿಸಿದ್ದರು. ಆದರೆ, ನನ್ನ ಬಳಿ ಇದ್ದ 4800 ರೂ.ಗಳನ್ನು ಅಪಹರಿಸಿದ್ದರು ಎಂದು ಚಾಲಕ ಕುಮಾರ್ ದೂರಿದ್ದ.