ಹರೀಶ್ ಬೇಲೂರು ಬೆಂಗಳೂರು
ರಾಜ್ಯದ ಆದಾಯ ಮೂಲಗಳಲ್ಲಿ ಅಬಕಾರಿ ಇಲಾಖೆಯೂ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿವರ್ಷವೂ ಕೋಟ್ಯಂತರ ರೂ.ಬೊಕ್ಕಸಕ್ಕೆ ಹರಿದುಬರುತ್ತದೆ. ಆದರೆ ಈ ವರ್ಷ ಆದಾಯದಲ್ಲಿ ಗಣನೀಯ ಕುಸಿತವಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಈ ಆದಾಯವನ್ನೇ ನಂಬಿಕೊಂಡಿದ್ದ ಸರ್ಕಾರಕ್ಕೆ ಇನ್ನಷ್ಟು ಆರ್ಥಿಕ ಹೊರೆ ಬೀಳುವ ಆತಂಕ ಎದುರಾಗಿದೆ.
2023ರ ಏ.1ರಿಂದ 2024ರ ಜ.25ರವರೆಗೆ 578.42 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮಾರಾಟವಾಗಿತ್ತು. 2024ರ ಏ.1ರಿಂದ 2025ರ ಜ.25ರವರೆಗೆ 575.42 ಬಾಕ್ಸ್ ಐಎಂಎಲ್ ಮಾರಾಟವಾಗಿದೆ. ಆದರೆ, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 3.24 ಲಕ್ಷ ಐಎಂಎಲ್ ಬಾಕ್ಸ್ ಕಡಿಮೆ ಮಾರಾಟವಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಬರಬೇಕಿದ್ದ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಕಳೆದ ವರ್ಷ 351.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಈ ಬಾರಿ 372.54 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಶೇ.5.92 ಹೆಚ್ಚಳವಾಗಿದೆ. 2024&25ನೇ ಸಾಲಿನಲ್ಲಿ 38,525 ಕೋಟಿ ರೂ.ರಾಜಸ್ವ ಸಂಗ್ರಹ ಗುರಿ ಪೈಕಿ 2025ರ ಜ.25ರವರೆಗೆ 28,775 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 27,903 ಕೋಟಿ ರೂ. ಆದಾಯ ಬಂದಿತ್ತು.
ರಾಜ್ಯದಲ್ಲಿ 4,002 ವೈನ್ಶಾಪ್ (ಸಿಎಲ್2), 302 ಕ್ಲಬ್ (ಸಿಎಲ್4), 95 ಸ್ಟಾರ್ ಹೋಟೆಲ್ (ಸಿಎಲ್6ಎ), 2,994 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್7), 71 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,644 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1071 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ, ವೈನ್ ಟವರ್ನ್ 202, ವೈನ್ ಬೋಟಿಕ್ 87 ಸೇರಿ ಒಟ್ಟು 13,519 ಮದ್ಯದಂಗಡಿಗಳಿವೆ. ಪ್ರತಿನಿತ್ಯ ಮದ್ಯ ಮಾರಾಟದಿಂದಾಗಿ 65&70 ಕೋಟಿ ರೂ. ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. ಆದರೆ, ಮದ್ಯದ ಬೆಲೆಯನ್ನು ತರ್ಕಬದ್ಧಗೊಳಿಸುವಿಕೆ ವೇಳೆ ಡಿಸ್ಟಿಲರಿ ಉತ್ಪಾದನಾ ಟಕಗಳು ಸೆಮಿ ಪ್ರೀಮಿಯಂ/ಪ್ರೀಮಿಯಂ ಮದ್ಯದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದ ಪರಿಣಾಮ 2 ತಿಂಗಳು ಕೊರತೆಯಾಗಿತ್ತು. ಅಬಕಾರಿ ನೀತಿ ಪರಿಷ್ಕರಿಸಿದ ಪರಿಣಾಮ ಆಂಧ್ರಪ್ರದೇಶ ಸರ್ಕಾರ ಆ ರಾಜ್ಯದ ಗಡಿಭಾಗದಲ್ಲಿ ವ್ಯಾಪಕವಾಗಿ ಸನ್ನದು ನೀಡಿರುವುದು, ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ಕರ್ನಾಟಕದಿಂದ ಆಂಧ್ರಕ್ಕೆ ಮಾರಾಟವಾಗುತ್ತಿದ್ದ ಮದ್ಯವನ್ನು ತಡೆದಿರುವುದು ಹಾಗೂ ಹೊರ ರಾಜ್ಯದ ಗ್ರಾಹಕರು ನಮ್ಮ ರಾಜ್ಯದ ಮದ್ಯ ಖರೀದಿಸಲು ಬರುವುದನ್ನು ನಿಯಂತ್ರಿಸಿರುವುದೂ ಸೇರಿ ವಿವಿಧ ಕಾರಣಗಳಿಂದ ಆದಾಯ ಖೋತಾ ಆಗಿದೆ.
ರಾಜಸ್ವ ಗುರಿ ತಲುಪಲು ವಿಫಲ?
2024-25ನೇ ಸಾಲಿನಲ್ಲಿ 38,525 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಪೈಕಿ 2025ರ ಜ.25 ರವರೆಗೆ 28,775 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಉಳಿದ ಎರಡು ತಿಂಗಳಲ್ಲಿ 10 ಸಾವಿರ ಕೋಟಿ ರೂ. ಆದಾಯ ತರುವ ಜವಾಬ್ದಾರಿ ಇಲಾಖೆ ಮೇಲಿದೆ. ಆದರೆ, ಪ್ರತಿ ತಿಂಗಳು 2,500-3,000 ಕೋಟಿ ರೂ. ಮದ್ಯ ಮಾರಾಟದಿಂದ ಆದಾಯ ಬರುತ್ತಿರುವ ಹಿನ್ನೆಲೆ ಸರ್ಕಾರ ನೀಡಿರುವ ರಾಜಸ್ವ ಗುರಿ ತಲುಪಲು ಇಲಾಖೆಗೆ ಸಾಧ್ಯವಾಗಿಲ್ಲ.
ತಿಂಗಳ ಅಬಕಾರಿ ಸಂಗ್ರಹ (ಕೋಟಿ ರೂ.ಗಳಲ್ಲಿ)
2023-24 2024-25 ತಿಂಗಳು ನಷ್ಟ (ಕೋಟಿ ರೂ.ಗಳಲ್ಲಿ)
2,308 2,264 ಏಪ್ರಿಲ್ 44
2,977 2,684 ಜುಲೈ 293
2,568 2,524 ಆಗಸ್ಟ್ 44
3,287 2,837 ಡಿಸೆಂಬರ್ 449
2,836 2,204 ಜ.25ವರೆಗೆ 243
ಯಾವ್ಯಾವ ಜಿಲ್ಲೆಗಳಲ್ಲಿ ಕಡಿಮೆ ಬಾಕ್ಸ್ ಮಾರಾಟ
ಬಳ್ಳಾರಿ, ರಾಯಚೂರು, ಕೋಲಾರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ಹಾವೇರಿ, ಉಡುಪಿ, ಉತ್ತರ ಕನ್ನಡ, ಬೆಳಗಾವಿ ಉತ್ತರ, ರಾಮನಗರ, ಚಿಕ್ಕಮಗಳೂರು, ಕೊಪ್ಪಳ, ಬೀದರ್, ಮೈಸೂರು ನಗರ, ಬೆಂ. ನಗರ (ಬಿಯುಡಿ-4), ಚಾಮರಾಜನಗರ, ಕಲಬುರಗಿ.
ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್: Santosh Lad