ಐಸಿಸಿ ಭಾರತದ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತದೆ; ಪಾಕ್​ ಮಾಜಿ ಆಟಗಾರನ ಆರೋಪ

Basit Ali
Published on

ಯುಎಸ್​ಎ: ಜೂನ್​ 02ರಿಂದ ಆರಂಭವಾಗಲಿರುವ ಚುಟುಕು ವಿಶ್ವಸಮರಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಟೀಮ್​ ಇಂಡಿಯಾ ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಕ್ರಿಕೆಟ್​ ಪ್ರೇಮಿಗಳು ಜೂನ್​ 09ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದು, ಕಾತುರದಿಂದ ಕಾಯುತ್ತಿದ್ದಾರೆ.

ಇತ್ತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಎರಡು ದೇಶಗಳ ನಡುವಿನ ಯುದ್ಧದಂತೆ ಭಾಸವಾಗುತ್ತದೆ. ಏಕೆಂದರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಅಷ್ಟಾಗಿ ಚೆನ್ನಾಗಿರದ ಕಾರಣ ಐಸಿಸಿ ಹಾಗೂ ಏಷ್ಯಾಕಪ್​ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಸಾಕಷ್ಟು ಕ್ರೇಜ್​ ಸೃಷ್ಟಿಯಾಗುತ್ತದೆ. ಇನ್ನೂ ಭಾರತ ವಿರುದ್ಧ ಪಾಕ್​ ಆಡುವ ಮುನ್ನ ಅಲ್ಲಿನ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಾಜಿ ಆಟಗಾರರೊಬ್ಬರು ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗಿದೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಈ ಕುರಿತು ಮಾತನಾಡಿರುವ ಮಾಜಿ ಆಟಗಾರ ಬಸಿತ್​ ಅಲಿ, ಐಸಿಸಿ ಉದ್ಧೇಶಪೂರ್ವಕವಾಗಿಯೇ ಪ್ರತಿಬಾರಿಯೂ ವಿಶ್ವಕಪ್​ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗುವಂತೆ ವೇಳಾಪಟ್ಟಿ ಸಿದ್ದಪಡಿಸುತ್ತದೆ. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಈ ಎರಡು ತಂಡಗಳು ಸೆಮಿಫೈನಲ್​ ಅಥವಾ ಫೈನಲ್​ ಪ್ರವೇಶಿಸುವುದಂತು ಖಂಡಿತಾ. ಎರಡು ತಂಡಗಳು ವಿಶ್ವಕಪ್​ನಲ್ಲಿ ಹೇಗೆ ಪ್ರದರ್ಶನ ನೀಡುತ್ತವೆ ಎಂಬುದು ಮುಖ್ಯವಾಗುತ್ತದೆ.

ಟೀಮ್​ ಇಂಡಿಯಾದ ಆಟಗಾರರು ಐಪಿಎಲ್​ ಆಡಿರುವುದರಿಂದ ಉತ್ತಮ ಫಾರ್ಮ್​ನಲ್ಲಿದ್ದಾರೆ. ಪಾಕಿಸ್ತಾನ ತಂಡವು ಫಾರ್ಮ್​ಗೆ ಮರಳಬೇಕಿದ್ದು, ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಭಾರತದ ವಿಚಾರದಲ್ಲಿ ಐಸಿಸಿ ಉದ್ದೇಶಪೂರ್ವಕವಾಗಿ ವೇಳಾಪಟ್ಟಿ ಸಿದ್ದಪಡಿಸುತ್ತಿದ್ದು, ಅಂತಿಮವಾಗಿ ಈ ಎರಡು ತಂಡಗಳು ಸೆಮಿಫೈನಲ್​ ಅಥವಾ ಫೈನಲ್​ನಲ್ಲಿ ಮುಖಾಮುಖಿಯಾಗುತ್ತವೆ. ಐಸಿಸಿ ಇದನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಸಿದ್ದಪಡಿಸಿದೆ ಎಂದು ಮಾಜಿ ಆಟಗಾರ ಬಸಿತ್​ ಅಲಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net