ಒಂದು ವೇಳೆ ಉತ್ತಮ ಸಂಭಾವನೆ ಕೊಟ್ರೆ ನಾನೇ... ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್ ಹೀಗೆನ್ನಲು ಕಾರಣವೇನು?

Rahul Dravid
Published on

ಮುಂಬೈ: ಚುಟುಕು ಮಾದರಿಯಲ್ಲಿ ಟೀಮ್​ ಇಂಡಿಯಾವನ್ನು ಎರಡನೇ ಬಾರಿ ಚಾಂಪಿಯನ್​ ಆಗಿಸಿದ ಕೀರ್ತಿ ರಾಹುಲ್​ ದ್ರಾವಿಡ್​ ಅವರಿಗೆ ಸಲ್ಲುತ್ತದೆ. ಟಿ20 ವಿಶ್ವಕಪ್​ ಮುಕ್ತಾಯದೊಂದಿಗೆ ರಾಹುಲ್​ ದ್ರಾವಿಡ್​ ಅವರ ಕೋಚಿಂಗ್​ ಅವಧಿ ಕೂಡ ಅಂತ್ಯವಾಗಿದ್ದು, ಹಲವರು ದ್ರಾವಿಡ್​ ಅವರನ್ನು ಮುಂದುವರೆಸುವಂತೆ ಆಗ್ರಹಿಸಿದ್ದರು. ಬಿಸಿಸಿಐ ಆಫರ್​ಅನ್ನು ನಯಾವಾಗಿ ತಿರಸ್ಕರಿಸಿದ್ದ ದ್ರಾವಿಡ್​ ಸದ್ಯ ಅವರು ಕ್ರಿಕೆಟ್​ನಿಂದ ಕೊಂಚ ಬ್ರೇಕ್​ ಪಡೆದಿದ್ದಾರೆ.

ಕ್ರಿಕೆಟ್​ನಿಂದ ಬ್ರೇಕ್​ ಪಡೆದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಹುಲ್​ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಇನ್ನು ದ್ರಾವಿಡ್​ ತಮ್ಮ ಬಯೋಪಿಕ್​ ಕುರಿತು ಮಾತನಾಡಿದ್ದು, ಅದರ ಜೊತೆಗೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ CEAT ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಹುಲ್​ ತಮ್ಮ ಬಯೋಪಿಕ್‌ ಸೇರಿದಂತೆ ಹಲವು ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದು, ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಈ ವಿಡಿಯೋ ವೈರಲ್​ ಆಗಿದೆ.

ಇನ್ನು ಸಂವಾದದಲ್ಲಿ ದ್ರಾವಿಡ್​ ಅವರಿಗೆ ನಿಮ್ಮ ಬಯೋಪಿಕ್​ ತಯಾರಾದರೆ, ನಿಮ್ಮ ಪಾತ್ರದಲ್ಲಿ ಯಾವ ನಟನನ್ನು ನೋಡಲು ಬಯಸುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ಕೂಲ್​ ಆಗೇ ಉತ್ತರಿಸಿದ ದ್ರಾವಿಡ್​ ನನಗೆ ಉತ್ತಮ ಸಂಭಾವನೆ ನೀಡಿದರೆ, ಈ ಪಾತ್ರವನ್ನು ನಾನೇ ಮಾಡಲು ಬಯಸುತ್ತೇನೆ. ಏಕೆಂದರೆ ಈ ಅವಕಾಶವನ್ನು ಬೇರೆಯವರಿಗೆ ಯಾಕೆ ಬಿಟ್ಟುಕೊಡಬೇಕು ಎಂದು ಹೇಳಿದರು.

ಇದರ ಜೊತೆಗೆ ಏಕದಿನ ಹಾಗೂ ಟಿ20 ವಿಶ್ವಕಪ್​ ಕುರಿತು ಪ್ರಶ್ನೆ ಕೇಳಲಾಯಿತು, ಇದಕ್ಕೆ ಉತ್ತರಿಸಿದ ದ್ರಾವಿಡ್, ಕೆಲವೊಮ್ಮೆ ಸ್ವಲ್ಪ ಅದೃಷ್ಟ ಕೂಡ ದೊಡ್ಡ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಇದಕ್ಕೆ ನಾನು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಮತ್ತು ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವನ್ನು ಉದಾಹರಣೆಯಾಗಿ ನೀಡುತ್ತೇನೆ ಎಂದು ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net