ಗಡಿರಕ್ಷಕ ಯೋಧರ ನಿತ್ಯ ಸ್ಮರಣೆ : ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಸಂತೋಷ್ ಪೈ ಅಭಿಪ್ರಾಯ

SURATHKAL
ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಶನಿವಾರ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಸರ್ವವನ್ನು ತ್ಯಾಗ ಮಾಡಿ ದೇಶದ ಗಡಿ ಕಾಯುವ ಯೋಧರ ನಿತ್ಯ ಸ್ಮರಣೆ, ಅವರಿಗೆ ಗೌರವಾರ್ಪಣೆ ಅಗತ್ಯ ಎಂದು ಬಾಳ ಬಿಎಎಸ್‌ಎಫ್‌ನ ಎಚ್‌ಆರ್ ವಿಭಾಗ ಮುಖ್ಯಸ್ಥ ಸಂತೋಷ್ ಪೈ ಹೇಳಿದರು. ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಶನಿವಾರ ಕಾರ್ಗಿಲ್ ವಿಜಯ ದಿನದ 25ನೇ ವರ್ಷಾಚರಣೆ ಸಂದರ್ಭ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಸೈನಿಕರ ಸಂಘದ ಪ್ರತಿನಿಧಿ ಸಾ.ಸದಾಶಿವ ಮುಂಚೂರು ಮಾತನಾಡಿ, ಹುತಾತ್ಮ ಸೈನಿಕರ ಸ್ಮಾರಕ ಸೈನಿಕರಿಗೆ ದೇವಸ್ಥಾನಕ್ಕೆ ಸಮಾನ ಎಂದರು. ಈ ಸಂದರ್ಭ ಶೌರ್ಯ ಚಕ್ರ ಪುರಸ್ಕೃತ ವೀರ ಸೇನಾನಿ ಕ್ಯಾ.ಎಂ.ವಿ.ಪ್ರಾಂಜಲ್ ಪುತ್ಥಳಿ ಅನಾವರಣ ನಡೆಯಿತು.

ಸೇನಾ ಮೆಡಲ್ ಪುರಸ್ಕೃತ ಕರ್ನಲ್ ರಾಜೇಶ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಪ್ರಮುಖರಾದ ಸುರತ್ಕಲ್ ಲಯನ್ಸ್ ಅಧ್ಯಕ್ಷ ಚಂದ್ರಮೋಹನ್, ಕಿರಣ್ ಇಡ್ಯಾ, ಓಂಪ್ರಕಾಶ್ ಶೆಟ್ಟಿಗಾರ್, ಅಪ್ಪು ಸ್ವಾಮಿ, ಟಿ.ಎನ್.ರಮೇಶ್, ಎ.ಪಿ.ಮೋಹನ್ ಗಣೇಶಪುರ, ಗಂಗಾಧರ್ ಪುತ್ರನ್, ರಾಧಾಕೃಷ್ಣ ಪಾಡಿ, ಜತೆ ಕಾರ್ಯದರ್ಶಿ ಅನಂತ್ರಾಜ್ ಶೆಟ್ಟಿಗಾರ್ ಮತ್ತಿತರರಿದ್ದರು. ಮಹೇಶ್ ಮೂರ್ತಿ ಸ್ವಾಗತಿಸಿದರು. ಶಶಿಕಲಾ ಶೆಟ್ಟಿ ಪ್ರಾರ್ಥಿಸಿದರು. ಗುಣವತಿ ರಮೇಶ್ ನಿರೂಪಿಸಿದರು. ಈ ಸಂದರ್ಭ ಮಾಜಿ ಸೈನಿಕರಿಗೆ, ಅವರ ಕುಟುಂಬದವರಿಗೆ ನಿಧಿ ಸಮರ್ಪಣೆ, ಗೌರವಾರ್ಪಣೆ ಇಡ್ಯಾ ದೇವಸ್ಥಾನದಿಂದ ಹಣತೆ ಮೆರವಣಿಗೆ ಇತ್ಯಾದಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net