The Vacant House Review ; ಹೆದರಿಸದ ಹಾರರ್‌ನಲ್ಲಿ ರೊಮ್ಯಾಂಟಿಕ್ ಟ್ವಿಸ್ಟ್

WhatsApp Image 2023-11-17 at 7.23.05 AM
Published on

ಚಿತ್ರ: ದಿ ವೆಕೆಂಟ್ ಹೌಸ್
ನಿರ್ದೇಶನ : ಎಸ್ತರ್ ನರೊನ್ಹಾ
ನಿರ್ಮಾಣ: ಜಾನೆಟ್ ನರೊನ್ಹಾ
ತಾರಾಗಣ: ಎಸ್ತರ್ ನರೊನ್ಹಾ, ಶ್ರೇಯಸ್ ಚಿಂಗ, ಸಂದೀಪ್ ಮಲಾನಿ, ಸೀಮಾ ಮತ್ತು ಮುಂತಾದವರು.

‘ನಮ್ಮ ಲೈಫಲ್ಲಿ ನಾವೇ ಒಮ್ಮೊಮ್ಮೆ ಪ್ರೇಕ್ಷಕರಾಗಬೇಕಾಗುತ್ತದೆ. ಜೀವನದಲ್ಲಿ ಏನೇ ನಡೆಯುತ್ತಿದ್ದರೂ, ಏನೂ ಮಾಡಕ್ಕಾಗಲ್ಲ. ಸುಮ್ನೇ ಕೂತ್ಕೊಂಡು ನೋಡ್ತಿರಬೇಕಷ್ಟೇ…’ ಎಂದು ನಾಯಕ ಮಾನವ್ ಬಳಿ (ಶ್ರೇಯಸ್) ಹೇಳುತ್ತಾಳೆ ನಾಯಕಿ ಮೋಹ (ಎಸ್ತರ್). ‘ದಿ ವೆಕೆಂಟ್ ಹೌಸ್’ ಕಥೆಯೂ ಅದೇ ರೀತಿಯೇ ಸಾಗುತ್ತದೆ. ಮೋಹ ಪರಿಸ್ಥಿತಿಯ ಕೈಗೊಂಬೆಯಾದರೆ, ಮಾನವ್ ಮೋಹಳ ಕೈಗೊಂಬೆಯಾಗುತ್ತಾನೆ. ಮೋಹವಿಲ್ಲದ ಮಾನವನಿಲ್ಲ ಎಂಬ ಕಲ್ಪನೆಯ ಸುತ್ತ ಈ ಹಾರರ್ ಥ್ರಿಲ್ಲರ್ ಕಥೆ ಸಾಗುತ್ತದೆ.

ಜೀವನೋತ್ಸಾಹವನ್ನೇ ಕಳೆದುಕೊಂಡ ಏಕಾಂಗಿ ಮಾನವ್ ಸ್ಕೂಲ್ ಟೀಚರ್. ಪ್ರತಿದಿನ ಎದ್ದು ರೆಡಿಯಾಗಿ ಶಾಲೆಗೆ ಹೋಗಿಬರುವುದಷ್ಟೇ ಆತನ ಜೀವನ. ಇಂತಹ ಬದುಕು ಬೇಕ ಅಂತ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾನೆ. ಅದೇ ಸಮಯದಲ್ಲಿ ಪಕ್ಕದಲ್ಲಿರುವ ಖಾಲಿ ಮನೆಗೆ ವಯಸ್ಸಾದ ಗಂಡ (ಸಂದೀಪ್ ಮಲಾನಿ), ಚಿಕ್ಕ ವಯಸ್ಸಿನ ಹೆಂಡತಿ ಮೋಹ ಆಗಮಿಸುತ್ತಾರೆ. ಮೋಹಳನ್ನು ನೋಡಿದ್ದೇ ತಡ ಇವನಿಗೆ ಜೀವನದಲ್ಲಿ ಹೊಸ ಹುರುಪು! ಮುಂದೆ ಇವರಿಬ್ಬರ ನಡುವೆ ಗೆಳೆತನ, ಪ್ರೀತಿ, ಜಗಳ ಎಲ್ಲವೂ ನಡೆಯುತ್ತದೆ. ಅದೇ ಸಮಯದಲ್ಲಿ ನಡೆಯುವ ಘಟನೆಯೊಂದು ಇಬ್ಬರ ಜೀವ, ಜೀವನ ಎರಡನ್ನೂ ಬದಲಿಸಿಬಿಡುತ್ತದೆ. ಹೇಗೆ? ಆ ಘಟನೆಯೇನು? ಮಾನವ್‌ಗೆ ಮೋಹ ಸಿಗುತ್ತಾಳಾ? ಮೋಹಳ ಗಂಡ ಏನಾಗುತ್ತಾನೆ? ತಿಳಿಯುವ ಕುತೂಹಲವಿದ್ದರೆ ಸಿನಿಮಾ ನೋಡಿ.

ಚಿತ್ರದಲ್ಲಿ ಕೇವಲ ಐದು ಪಾತ್ರಗಳಿದ್ದು, ಅದರಲ್ಲೂ ಎರಡು ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ಇಲ್ಲಿ ನಿರ್ದೇಶಕಿ ಎಸ್ತರ್‌ಗಿಂತ ನಟಿ ಎಸ್ತರ್ ಗೆದ್ದಿದ್ದಾರೆ. ಪ್ರಿಕ್ಲೈಮ್ಯಾಕ್ಸ್‌ನಲ್ಲಿ ಅವರ ಅಭಿನಯ ನೋಡುವುದೇ ಚಂದ. ಆದರೆ, ನಿರ್ದೇಶಕಿ ಎಸ್ತರ್ ಸಿನಿಮಾದಾದ್ಯಂತ ಎಡವಿದ್ದಾರೆ. ಕೇವಲ 102 ನಿಮಿಷಗಳ ಸಿನಿಮಾ ಆದರೂ, ಕುಂಟುತ್ತಾ, ತೆವಳುತ್ತಾ ಸಾಗುತ್ತದೆ. ಅದರ ನಡುವೆಯೂ ಕೆಲವೆಡೆ ಹೊಸ ಟ್ವಿಸ್ಟ್ ಮತ್ತು ಟರ್ನ್‌ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಎಸ್ತರ್. ನಟ ಶ್ರೇಯಸ್ ಚಿಂಗ ಇನ್ನೂ ಮಾಗಬೇಕು. ಸಂದೀಪ್ ಮಲಾನಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೆದರಿಸದೇ, ಬೆದರಿಸದೇ ನಿಧಾನವಾಗಿ ಸಾಗುವ ಹಾರರ್ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ‘ದಿ ವೆಕೆಂಡ್ ಹೌಸ್’ ಇಷ್ಟವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net