

ನವದೆಹಲಿ: ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಸರಣಿಗಳನ್ನು ಗೆಲ್ಲುವ ಮೂಲಕ 2024ನೇ ವರ್ಷವನ್ನು ಭರ್ಜರಿಯಾಗಿ ಬರಮಾಡಿಕೊಂಡಿರುವ ಟೀಂ ಇಂಡಿಯಾ ಮುಂಬರುವ ದ್ವಿಪಕ್ಷೀಯ ಸರಣಿಗಳಿಗೆ ತಯಾರಿ ನಡೆಸುತ್ತಿದೆ. ಭಾರತ ತನ್ನ ಮುಂದಿನ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದ್ದು, ಜನವರಿ 25ರಿಂದ ಟೆಸ್ಟ್ ಪಂದ್ಯದ ಮೂಲಕ ಆರಂಭವಾಗಲಿದೆ.
ಇನ್ನು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಮಾತನಾಡಿರುವ ಭಾರತ ಮೂಲದ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್, ಬೆನ್ ಸ್ಟೋಕ್ಸ್ ಪಡೆಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಇಂಗ್ಲೆಂಡ್ ಆಟಗಾರರು ಸ್ಲೆಡ್ಜ್ ಮಾಡಬೇಕು ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತವರಿನ ಮೈದಾನದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವುದು ಅಷ್ಟು ಸುಲಭದ ಮಾತಲ್ಲ. ಅವರ ಅಸಾಧಾರಣ ಆಟದಿಂದಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಶಕ್ತಿ ಅವರಿಗಿದೆ. ಅವರ ಆಕ್ರಮಣಶೀಲತೆ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಏಕದಿನ ಹಾಗೂ ಟಿ-20 ವಿಶ್ವಕಪ್ ಗೆದ್ದಿರುವ ತಂಡದ ಭಾಗವಾಗಿರುವ ಸ್ಟೋಕ್ಸ್ ಕೊಹ್ಲಿ ಅವರನ್ನು ಸ್ಲೆಡ್ಜ್ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಜನವರಿ 25-29, ಎರಡನೇ ಪಂದ್ಯ ಫೆಬ್ರವರಿ 2-6, ಮೂರನೇ ಪಂದ್ಯ ಫೆ. 15-19, ನಾಲ್ಕನೇ ಟೆಸ್ಟ್ ಫೆ. 23-27 ಹಾಗೂ ಕೊನೆಯ ಐದನೇ ಪಂದ್ಯ ಮಾರ್ಚ್ 7-11 ವರೆಗೆ ಆಯೋಜಿಸಲಾಗಿದೆ. 2021ರಲ್ಲಿ ಭಾರತದ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಸರಣಿ ಆಡಿದ್ದ ಇಂಗ್ಲೆಂಡ್ 3-1 ಅಂತರದಲ್ಲಿ ಸೋಲುಂಡಿತ್ತು.