

ಲಂಡನ್: ಇಂಗ್ಲೆಂಡ್ನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. ಇದರ ನಡುವೆಯೂ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಕ್ರಿಕೆಟ್ ತಂಡ ಸಜ್ಜಾಗುತ್ತಿದೆ. ‘ರೈಸ್ ದಿ ಬ್ಯಾಟ್’ ಎಂಬ ಹೆಸರಿನ ಮೂಲಕ ಈಗಾಗಲೆ ಈ ಸರಣಿಯನ್ನು ಕರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಅರ್ಪಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಇದೇ ವೇಳೆ ಇಂಗ್ಲೆಂಡ್ ಆಟಗಾರರೂ ದೇಶದಲ್ಲಿ ಕರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸುವ ಸಲುವಾಗಿ, ಆಯ್ದ ಕೋವಿಡ್ ವಾರಿಯರ್ಸ್ ಹೆಸರು ಇರುವ ಜೆರ್ಸಿಯನ್ನು ಅಭ್ಯಾಸದ ವೇಳೆ ಧರಿಸಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತದ ಮೂಲದ ವೈದ್ಯರಿಗೂ ಈ ಗೌರವ ಸಿಗಲಿದೆ.
ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್ಟೇಕರ್ ನಿವೃತ್ತಿ
ಕ್ರಿಕೆಟ್ ಜತೆ ಸಂಬಂಧ ಹೊಂದಿರುವ ಕೋವಿಡ್ ವಾರಿಯರ್ಸ್ಗಳ ಹೆಸರುಗಳನ್ನೇ ಇಂಗ್ಲೆಂಡ್ ಕ್ರಿಕೆಟಿಗರು ಜೆರ್ಸಿಯಲ್ಲಿ ಬರೆಯಲಿದ್ದಾರೆ. ಕೌಗೇಟ್ ಕ್ರಿಕೆಟ್ ಕ್ಲಬ್ ಪರ ಆಡಿರುವ ಭಾರತ ಮೂಲದ ಡಾ. ವಿಕಾಸ್ ಕುಮಾರ್ ಅವರು ಈಗ ಡಾಲಿಂಗ್ಟನ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದು, ಅವರ ಹೆಸರು ಕೂಡ ಇಂಗ್ಲೆಂಡ್ ಆಟಗಾರರ ಜೆರ್ಸಿಯಲ್ಲಿ ಇರಲಿದೆ. ವೈದ್ಯರು ಮಾತ್ರವಲ್ಲದೆ ನರ್ಸ್ಗಳು, ಅಧ್ಯಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರ ಹೆಸರು ಇರುವ ಜೆರ್ಸಿಯನ್ನು ಆಟಗಾರರು ಧರಿಸಲಿದ್ದಾರೆ.
ಜುಲೈ 8ರಿಂದ ನಡೆಯಲಿರುವ ಟೆಸ್ಟ್ ಸರಣಿಯ 3 ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಳೆದ ಮಾರ್ಚ್ನಿಂದ ಎಲ್ಲ ಪ್ರಮುಖ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಲಾಕ್ಡೌನ್ ನಂತರ ಇದು ಮೊದಲ ಪ್ರಮುಖ ಸ್ಪರ್ಧಾತ್ಮಕ ಕ್ರಿಕೆಟ್ ಸರಣಿ ಆಗಿರಲಿದೆ.