ಇಂಗ್ಲೆಂಡ್​ ವೇಗಿ ಜೇಮ್ಸ್​ ಆಂಡರ್​ಸನ್​ಗೆ 700 ವಿಕೆಟ್​ ಕಬಳಿಸುವಾಸೆ..!

JAMES ANDERSON FOR WEB
Published on

ಸೌಥಾಂಪ್ಟನ್​: 600 ವಿಕೆಟ್​ ಕಬಳಿಸಿದ ಬಳಿಕ ವೃತ್ತಿ ಜೀವನಕ್ಕೆ ಗುಡ್​ಬೈ ಹೇಳಲಿದ್ದಾರೆ ಎಂಬ ಕ್ರಿಕೆಟ್​ ಪಂಡಿತರ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಜೇಮ್ಸ್​ ಆಂಡರ್​ಸನ್​ 700 ವಿಕೆಟ್​ ಪಡೆಯುವುದೇ ಮುಂದಿನ ಗುರಿ ಎಂದು ಹೇಳಿಕೊಂಡಿದ್ದಾರೆ. ಮುಂದಿನ ಆಶಸ್​ ಸರಣಿಗೆ ಸನ್ನದ್ಧವಾಗುತ್ತಿರುವುದಾಗಿ ಹೇಳಿದ್ದಾರೆ. ಮುಂದಿನ ಆಶಸ್​ ಸರಣಿ (18 ತಿಂಗಳಿದೆ) ವೇಳೆಗೆ 39ನೇ ವರ್ಷಕ್ಕೆ ಕಾಲಿಡಲಿರುವ ಆಂಡರ್​ಸನ್​, ಮತ್ತಷ್ಟು ದಿನಗಳ ಕಾಲ ಟೆಸ್ಟ್​ ಕ್ರಿಕೆಟ್​ ಆಡುವ ಬಯಕೆ ಹೊಂದಿದ್ದಾರೆ. 2003ರಲ್ಲಿ ಮೊದಲ ಟೆಸ್ಟ್​ ಪಂದ್ಯವಾಡಿದಾಗ 600 ವಿಕೆಟ್​ ಪಡೆಯುತ್ತೇನೆ ಎಂದು ಎಣಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 600 ವಿಕೆಟ್​ ಕಬಳಿಸಿದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ 4ನೇ ಬೌಲರ್​ ಎಂಬ ಸಾಧನೆಗೆ ಪಾತ್ರರಾಗಿರುವ ಇಂಗ್ಲೆಂಡ್​ ವೇಗಿ ಜೇಮ್ಸ್​ ಆಂಡರ್​ಸನ್​ ಸಾಧನೆಗ ಭಾರತ ತಂಡದ ಮಾಜಿ ನಾಯಕರಾದ ಅನಿಲ್​ ಕುಂಬ್ಳೆ, ಸೌರವ್​ ಗಂಗೂಲಿ ಶ್ಲಾಘಿಸಿದ್ದಾರೆ. ಸೌಥಾಂಪ್ಟನ್​ನಲ್ಲಿ ಮಂಗಳವಾರ ಅಂತ್ಯಗೊಂಡ 3ನೇ ಟೆಸ್ಟ್​ ಪಂದ್ಯದ ಅಂತಿಮ ದಿನದಾಟದಲ್ಲಿ ಪಾಕಿಸ್ತಾನದ ನಾಯಕ ಅಜರ್​ ಅಲಿ ವಿಕೆಟ್​ ಕಬಳಿಸುವ ಮೂಲಕ 38 ವರ್ಷದ ಆಂಡರ್​ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಪೂರೈಸಿದರು.

600 ವಿಕೆಟ್​ ಕಬಳಿಸಿದ್ದಕ್ಕೆ ಅಭಿನಂದನೆಗಳು ಜಿಮ್ಮಿ..! ಕ್ಲಬ್​ಗೆ ಸ್ವಾಗತ. ಸರ್ವಶ್ರೇಷ್ಠ ವೇಗದ ಬೌಲರ್​ ಎಂದು ಕನ್ನಡಿಗ ಅನಿಲ್​ ಕುಂಬ್ಳೆ ಟ್ವೀಟ್​ ಮಾಡಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ 600 ವಿಕೆಟ್​ ಕಬಳಿಸಿದ ವಿಶ್ವದ 4ನೇ ಬೌಲರ್​ ಆಂಡರ್​ಸನ್​. ಇದಕ್ಕೂ ಮೊದಲು ಭಾರತದ ಮಾಜಿ ಲೆಗ್​ ಸ್ಪಿನ್ನರ್​ ಅನಿಲ್​ ಕುಂಬ್ಳೆ (619), ಆಸ್ಟ್ರೆಲಿಯಾದ ದಿಗ್ಗಜ ಸ್ಪಿನ್ನರ್​ ಶೇನ್​ ವಾರ್ನರ್​ (708) ಹಾಗೂ ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್​ (800) ಈ ಸಾಧನೆ ಮಾಡಿದ್ದರು. ಆಂಡರ್​ಸನ್​ ಸಾಧನೆ ಕುರಿತು ಟ್ವೀಟ್​ ಮಾಡಿರುವ ಬಿಸಿಸಿಐ ಅಧ್ಯಕ್ಷರೂ ಆದ ಸೌರವ್​ ಗಂಗೂಲಿ, ನಿಮ್ಮ ಸಾಧನೆ ಯುವಕರಿಗೆ ಸ್ಫೂರ್ತಿ. 156 ಪಂದ್ಯಗಳಲ್ಲೇ ನಿಮ್ಮ ಸಾಧನೆ ಮೆಚ್ಚುವಂಥದ್ದು. ವೇಗಿಗಳು 600 ವಿಕೆಟ್​ ಪಡೆಯುವುದು ಯೋಚಿಸುವುದು ಕಷ್ಟ. ಇದನ್ನು ನೀವು ಸುಳ್ಳು ಮಾಡಿ, ವೇಗಿಗಳು ಕೂಡ ಇಂಥ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದೀರಿ ಎಂದು ಗಂಗೂಲಿ ಟ್ವೀಟ್​ ಮಾಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕೂಡ ಆಂಡರ್​ಸನ್​ ಸಾಧನೆಯನ್ನು ಕೊಂಡಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net