

ನವದೆಹಲಿ: ಕೆಲ ದಿನಗಳ ಹಿಂದೆ ನಿಧನರಾದ ಇಂಗ್ಲೆಂಡ್ ಕ್ರಿಕೆಟ್ನ ಹೆಸರಾಂತ, ದಿಗ್ಗಜ ಆಟಗಾರ ಗ್ರಹಾಂ ಥೋರ್ಪ್ ಅವರ ಸಾವಿನ ಸುದ್ದಿ ಕ್ರೀಡಾಲೋಕಕ್ಕೆ ಬರ ಸಿಡಿಲಿನಂತೆ ಬಡಿದಿತ್ತು. ಆರಂಭದಲ್ಲಿ ಇದು ಸಹಜ ಸಾವು ಎಂದು ಹೇಳಲಾಗಿತ್ತಾದರೂ ಆ ಬಳಿಕ ಇದು ಆತ್ಮಹತ್ಯೆ ಎಂದು ಸಾಬೀತಾಗಿತ್ತು. ಈ ವಿಚಾರವನ್ನು ಕುಟುಂಬಸ್ಥರು ಖಚಿತಪಡಿಸಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದು ತಿಳಿದು ಬಂದಿರಲಿಲ್ಲ. ಇದೀಗ ಈ ಬಗ್ಗೆ ವರದಿಯೊಂದು ಹೊರಬಿದ್ದಿದ್ದು, ಮತ್ತಷ್ಟು ಆಘಾತವನ್ನುಂಟು ಮಾಡಿದೆ.
ಆಗಸ್ಟ್ 05ರಂದು ಥೋರ್ಪ್ ಮೃತಪಟ್ಟಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಇದಾದ ಕೆಲ ದಿನಗಳ ಬಳಿಕ ಅಂದರೆ ಆಗಸ್ಟ್ 12ರಂದು ಅವರ ಕುಟುಂಬಸ್ಥರು ಥೋರ್ಪ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿದ್ದರು. ಆದರೆ, ಕಾರಣವನ್ನು ತಿಳಿಸಿರಲಿಲ್ಲ. ಇದೀಗ ಪ್ರತಿಷ್ಠಿತ ಸುದ್ದಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಥೋರ್ಪ್ ಅವರು ರೈಲಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಪ್ರಕಟಿಸಿವೆ.
ಆಗಸ್ಟ್ 04ರಂದು ಬೆಳಗ್ಗೆ 8:30ರ ಸುಮಾರಿಗೆ ಈಶರ್ ರೈಲ್ವೆ ನಿಲ್ದಾಣದ ಟ್ರ್ಯಾಕ್ ಮೇಲೆ ವ್ಯಕ್ತಿಯೊಬ್ಬನ ಮೃತ ದೇಹವಿರುವ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ರೈಲ್ವೆ ಅಧಿಕಾರಿಗಳು ಕೂಡಲೇ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಅರೆವೈದ್ಯರು ಟ್ರ್ಯಾಕ್ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಪರೀಕ್ಷಿಸಲಾಗಿ, ಆತ ಅದಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಧಿಕಾರಿಗಳು ಅದು ಗ್ರಹಾಂ ಥೋರ್ಪ್ ಮೃತದೇಹ ಎಂದು ಖಚಿತಪಡಿಸಿದ್ದರು.
ಥೋರ್ಪ್ ಬಹಳ ದಿನಗಳಿಂದ ಖಿನ್ನತೆ ಮತ್ತು ಒತ್ತಡದಿಂದ ಬಳಲುತ್ತಿದ್ದರು. ಎರಡು ವರ್ಷಗಳ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಕೂಡಿಸಿತ್ತಾದರೂ ಅವರು ಇದರಿಂದ ಚೇತರಿಸಿಕೊಳ್ಳಲಿಲ್ಲ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಹುಶಃ ನಾನಿಲ್ಲದಿದ್ದರೆ, ನನ್ನ ಹೆಂಡತಿ ಮಕ್ಕಳು ನೆಮ್ಮದಿಯ ಜೀವನ ನಡೆಸುತ್ತಾರೆ ಎಂದು ಭಾವಿಸಿ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಥೋರ್ಪ್ ಪತ್ನಿ ದಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈ ಮೂಲಕ ಥೋರ್ಪ್ ಅವರ ಆತ್ಮಹತ್ಯೆ ಹಿಂದಿನ ಕಾರಣ ತಿಳಿದು ಬಂದಿದೆ.
ಎಡಗೈ ಬ್ಯಾಟರ್ ಆಗಿದ್ದ ಥೋರ್ಪ್, ಇಂಗ್ಲೆಂಡ್ ಪರ 182 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರಹಾಂ ಥೋರ್ಪ್ 16 ಶತಕಗಳು ಸೇರಿದಂತೆ 6,744 ರನ್ ಕಲೆಹಾಕಿದ್ದರು. ಇದಲ್ಲದೆ, 82 ಏಕದಿನ ಪಂದ್ಯಗಳಲ್ಲಿ 21 ಅರ್ಧಶತಕ ಸೇರಿದಂತೆ 2,380 ರನ್ ಸಿಡಿಸಿದ್ದರು. ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 341 ಪಂದ್ಯಗಳನ್ನು ಆಡಿರುವ ಥೋರ್ಪ್ ಅವರು 49 ಶತಕಗಳ ಸಹಿತ 21,937 ರನ್ ಬಾರಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ.