

ನವದೆಹಲಿ: ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭಕ್ಕೂ ಮುನ್ನ ಆ ದೇಶದ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮಾಜಿ ಆಟಗಾರರು ಮಾತನಾಡುವಾಗ ಬೇಕಂತಲೇ ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕುವ ಮೂಲಕ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ಕುರಿತು ನೀಡಿರುವ ಹೇಳಿಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯಲಿರುವ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯು ಈ ಬಾರಿ ಕಾಂಗರೂಗಳ ನೆಲದಲ್ಲಿ ನಡೆಯಲಿದ್ದು, ನವೆಂಬರ್ ಮತ್ತು ಜನವರಿ ನಡುವೆ ನಡೆಯಲಿರುವ ಈ ಟೆಸ್ಟ್ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಿಸಲಾಗುತ್ತದೆ. ಈ ಮೊದಲು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಎರಡೂ ದೇಶಗಳು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ.
ಈ ಹಿಂದೆ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಭಾರತದಲ್ಲೇ ಸತತ ಎರಡು ಬಾರಿ ಆಸ್ಟ್ರೇಲಿಯಾವನ್ನು ಸೋಲಿಸಿರುವ ಟೀಂ ಇಂಡಿಯಾ 2023 ರಲ್ಲಿ, ಕಾಂಗರೂಗಳ ನಾಡಲೇ ಆಸ್ಟ್ರೇಲಿಯಾ ತಂಡವನ್ನು 4-1 ರಿಂದ ಸೋಲಿಸಿ ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿತ್ತು. ಹೀಗಾಗಿ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಸರಣಿಯ ಬಗ್ಗೆ ಭವಿಷ್ಯ ನುಡಿದಿದ್ದು, ಟೀಂ ಇಂಡಿಯಾಕ್ಕೆ ಸವಾಲೆಸೆದಿದ್ದಾರೆ.
ಐಸಿಸಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಿಕಿ ಪಾಂಟಿಂಗ್, ಇದು ಸ್ಪರ್ಧಾತ್ಮಕ ಸರಣಿಯಾಗಲಿದ್ದು, ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 3-1 ಅಂತರದಲ್ಲಿ ಜಯಿಸಲಿದೆ. ಏಕೆಂದರೆ ಕಳೆದ ಎರಡು ಬಾರಿ ಆಸ್ಟ್ರೇಲಿಯಾ ತಂಡವು ಭಾರತದ ಎದುರು ಸೋತಿರುವ ಕಾರಣ ಈ ಬಾರಿ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ ಗೆಲ್ಲುವುದು ಖಚಿತ.
ಈ ಬಾರಿ ಐದು ಟೆಸ್ಟ್ ಪಂದ್ಯಗಳನ್ನು ಆಡಿಸುತ್ತಿರುವ ಕಾರಣ ನಾನು ವೈಟ್ವಾಶ್ ಮಾಡಲಿದೆ ಎಂದು ನಾನು ಹೇಳುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಒಂದು ಪಂದ್ಯ ಡ್ರಾ ಆಗುತ್ತದೆ. ಹೀಗಾಗಿ ಆಸ್ಟ್ರೇಲಿಯಾ ಈ ಸರಣಿಯಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲಿದ್ದು, ಟೀಂ ಇಂಡಿಯಾ ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದು ಎಂದು ಮಾಜಿ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಾ ಗಹಾಗೂ ಭಾರತ ನಡುವಿನ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22, 2024 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯವು 2024 ರ ಜನವರಿ 03 ರಿಂದ ಜನವರಿ 07 ರ ನಡುವೆ ನಡೆಯಲಿದೆ. ಈ ಸರಣಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಕೂಡ ಒಳಗೊಂಡಿದೆ.